ಸರ್ಕಾರಿ ಶಾಲೆಗಳಿಗೆ ಆರ್ಥಿಕ ನೆರವು ಅಗತ್ಯ

BYD KALIKE
Published on

ಬ್ಯಾಡಗಿ: ಸರ್ಕಾರಿ ಶಾಲೆಗಳಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ದಾಖಲಾತಿ ಪಡೆದಿರುತ್ತಾರೆ. ಅಂಥವರಿಗೆ ಸರ್ಕಾರದ ಯೋಜನೆಗಳ ಜತೆಗೆ ಖಾಸಗಿ ಉದ್ಯಮಿಗಳು, ಸಂಘ, ಸಂಸ್ಥೆಗಳು ಆರ್ಥಿಕ ನೆರವು ನೀಡಿದಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡಬಲ್ಲರು ಎಂದು ಉದ್ಯಮಿ ಕುಮಾರಗೌಡ್ರ ಪಾಟೀಲ ಹೇಳಿದರು.

ತಾಲೂಕಿನ ಬಿಸಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 2025-26ನೇ ಸಾಲಿನ ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ ಹಾಗೂ ಖಾಸಗಿ ಕಂಪನಿ ನೀಡಿದ ಆಧುನಿಕ ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಬಹುತೇಕ ವಿದ್ಯಾರ್ಥಿಗಳು ಆರ್ಥಿಕವಾಗಿ ತೊಂದರೆಯಲ್ಲಿದ್ದು, ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಸಾಮಗ್ರಿ ಸೇರಿ ಹಲವು ಸೌಲಭ್ಯಗಳಿದ್ದು, ಖಾಸಗಿ ಶಾಲಾ ವಿದ್ಯಾರ್ಥಿಗಳ ಜತೆ ತೀವ್ರ ಪೈಪೋಟಿ ಮಾಡಬೇಕಿದೆ. ಪೀಠೋಪಕರಣಗಳು, ಹೊಸ ತಂತ್ರಜ್ಞಾನದ ಅಗತ್ಯವಿದೆ. ಆರ್ಥಿಕ ಸ್ಥಿತಿವಂತರು ಶಾಲೆಗಳಿಗೆ ಸಹಕಾರ ನೀಡಬೇಕಿದೆ. ಖಾಸಗಿ ಕಂಪನಿಯವರು ಮಕ್ಕಳಿಗೆ ಪ್ರಾಜೆಕ್ಟ್ ಸೇರಿದಂತೆ 1.70 ಲಕ್ಷ ರೂ. ಮೌಲ್ಯದ ಅಧ್ಯಯನ ಸಾಮಗ್ರಿ ವಿತರಿಸಿದ್ದಾರೆ ಎಂದರು.

ಮಂಜುನಾಥ ಉಪ್ಪಾರ ಮಾತನಾಡಿ, ತಾಲೂಕಿನಲ್ಲಿ ಅತ್ಯುತ್ತಮ ಫಲಿತಾಂಶ ಹಾಗೂ ಗುಣಮಟ್ಟದ ಶಿಕ್ಷಣ ಪೂರೈಸುವ ಶಾಲೆಗಳಲ್ಲಿ ಬಿಸಲಹಳ್ಳಿ ವಿಶೇಷ ಸ್ಥಾನ ಪಡೆದಿದೆ. ತಾಲೂಕಿನ ಎಲ್ಲ ಪ್ರೌಢಶಾಲೆಗಳಿಗೂ ಉದ್ಯಮಿ ಬಸವರಾಜ ಸುಂಕಾಪುರ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪೂರ್ವ ಸಿದ್ಧತೆಯ ಮಾದರಿ ಪುಸ್ತಕಗಳನ್ನು ಮುದ್ರಿಸಿ ಉಚಿತವಾಗಿ ವಿತರಿಸುತ್ತಿದ್ದಾರೆ ಎಂದರು.

ಬಸವರಾಜ ಸುಂಕಾಪುರ, ಮಂಜುನಾಥ ಉಪ್ಪಾರ, ಮುರಳಿ ಕೃಷ್ಣನ್, ಬಾಲರಾಜ ಅಶ್ವಿಕ್, ಮುಖ್ಯ ಶಿಕ್ಷಕ ಜೀವರಾಜ ಛತ್ರದ, ಸೌಭಾಗ್ಯ ಕುಣತಿ, ಶ್ರೀಧರ ಹಣಗಿ, ಎಸ್​ಡಿಎಂಸಿ ಅಧ್ಯಕ್ಷ ಲೋಕೇಶ ಮಾಗೆ, ಶಂಭಣ್ಣ ಎಲಿಗಾರ, ಕರಿಯಣ್ಣ ಕೊಲ್ಲಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net