ಸರ್ಕಾರಿ ಶಾಲೆಗಳಿಗೆ ದಾಖಲೆಗಳೇ ಇಲ್ಲ

byn (2)
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಆಡಳಿತ ವ್ಯವಸ್ಥೆ ಸುಧಾರಿಸಲು ಸರ್ಕಾರ ಹತ್ತಾರು ತಂತ್ರಾಂಶ ಯೋಜನೆ ಜಾರಿಗೆ ತರುತ್ತದೆ. ಸರ್ಕಾರಿ ಇಲಾಖೆಗಳಲ್ಲಿ ನಿರಂತರ ಕಡತ ಪರಿಶೀಲನೆ ನಡೆಯುತ್ತಿರುತ್ತದೆ. ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಸರ್ಕಾರಿ ಶಾಲೆಗೆ ಮೀಸಲಿರಿಸಿದ ಜಾಗ ಶಾಲೆಯ ಹೆಸರಿನಲ್ಲೇ ಇಲ್ಲವೆಂಬುದು ಬೆಳಕಿಗೆ ಬಂದಿದೆ. ಕೆಲವು ಡೀಮ್ಡ್ ಫಾರೆಸ್ಟ್ ಆಗಿದ್ದರೆ ಬಹುತೇಕ ಶಾಲೆಗಳ ಜಾಗ ಇಂದಿಗೂ ಖಾಸಗಿ ಹೆಸರಿನಲ್ಲಿವೆ.

ಸರ್ಕಾರದ ಬಹುತೇಕ ಯೋಜನೆಗಳು ಆನ್‌ಲೈನ್ ವ್ಯವಸ್ಥೆಗೆ ವಾರ್ಪಾಡಾಗಿದೆ. ಸ್ಥಳೀಯ ರಾಜಕೀಯ, ಭೂವಾಫಿಯಾಗಳ ನಡುವೆ ಸರ್ಕಾರಿ ಶಾಲೆ ಶಿಕ್ಷಕರಿಗೆ ಶಾಲೆಯ ಆಸ್ತಿ ಉಳಿಸಿಕೊಳ್ಳುವುದೇ ಸವಾಲಾಗಿದೆ. ಶಿಕ್ಷಣ ಇಲಾಖೆಯ ನೂರೆಂಟು ಯೋಜನೆಗಳ ಅನುಷ್ಠಾನ, ಶಿಕ್ಷಕರ ವರ್ಗಾವಣೆ ಇವುಗಳ ನಡುವೆ ಇಚ್ಛಾಶಕ್ತಿಯ ಕೊರತೆ ಕೂಡ ಶಾಲೆಗಳ ಕಡತದ ಕಡೆ ಗಮನಹರಿಸದಂತೆ ವಾಡಿದೆ. ವಾತ್ರವಲ್ಲದೆ ಭೂದಾಖಲೆ ಸರಿಪಡಿಸಲು ಹತ್ತಾರು ಬಾರಿ ಕಂದಾಯ ಇಲಾಖೆಗೆ ಅಲೆಯುವಂತಾಗಿದೆ.

ಶಾಲಾ ಅವಧಿ ಹೊರತುಪಡಿಸಿ ದಾಖಲೆಗಳ ಬೆನ್ನು ಹತ್ತಲು ಮುಖ್ಯಶಿಕ್ಷಕರಿಗೂ ಅವಕಾಶ ಇಲ್ಲದಂತಾಗಿದೆ. ಕನ್ನಡ ಶಾಲೆ ಉಳಿಸಲು ಮತ್ತು ಶಾಲೆಯ ಹಿರಿಮೆ ಉಳಿಸಿಕೊಳ್ಳಬೇಕಾದರೆ ಪ್ರತಿ ಶಾಲೆಗಳಲ್ಲಿ ಭೂದಾಖಲೆ ಸರಿಪಡಿಸಿಕೊಳ್ಳಬೇಕಿದೆ.

ಶಿಕ್ಷಕರೂ ಇಲ್ಲ ವಿದ್ಯಾರ್ಥಿಗಳು ಬರುತ್ತಿಲ್ಲ

ಬೈಂದೂರು ವಲಯದ 189 ಶಾಲೆಗಳಲ್ಲಿ 175 ಶಿಕ್ಷಕರ ಕೊರತೆ ಇದೆ. 23 ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿವೆ. ಸುವಾರು 67 ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 25ಕ್ಕಿಂತ ಕಡಿಮೆ ಇದ್ದರೆ 16 ಶಾಲೆಗಳಲ್ಲಿ ಹತ್ತಕ್ಕೂ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಸುವಾರು 72 ಶಾಲೆಗಳ ಕಟ್ಟಡಗಳು ದುಸ್ಥಿತಿಯಲ್ಲಿವೆ. ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿ ಅತ್ಯಂತ ದೊಡ್ಡದರು. ಪ್ರತಿದಿನ ಅಕ್ಷರ ದಾಸೋಹ, ಊಟದ ವಿವರ, ಹಾಲು, ಮೊಟ್ಟೆ ಲೆಕ್ಕಾಚಾರಗಳನ್ನು ಎಂಓಎಂ ತಂತ್ರಾಂಶಗಳಿಂದ ಅಳವಡಿಸಲು ನೆಟ್‌ವರ್ಕ್ ಸಮಸ್ಯೆ. ಹೀಗಾಗಿ ದಿನದಿಂದ ದಿನಕ್ಕೆ ಸರ್ಕಾರಿ ಶಾಲೆಗಳಲ್ಲಿ ಪ್ರಗತಿ ಕುಂಠಿತವಾಗುತ್ತಿದೆ. ಕಾನ್ಕಿ ಹಾಗೂ ಹಡವು ಶಾಲೆಗಳು ಈ ಬಾರಿ ಬಾಗಿಲು ಮುಚ್ಚಿವೆ.

ನೂರು ವರ್ಷಗಳಾದರೂ ದಾಖಲೆಗಳಿಲ್ಲ

ಬೈಂದೂರು ವ್ಯಾಪ್ತಿಯಲ್ಲಿ 189 ಪ್ರಾಥಮಿಕ ಹಾಗೂ 41 ಪ್ರೌಢಶಾಲೆಗಳಿವೆ. ಅವುಗಳಲ್ಲಿ 44 ಶಾಲೆಗಳಿಗೆ ಭೂದಾಖಲೆ ಇದುವರೆಗೂ ಆಗಿಲ್ಲ. ಕೆಲವು ಕಡೆ ಶಾಲೆ ಆರಂಭವಾಗಿ ನೂರು ವರ್ಷವಾದರೂ ಶಾಲೆಯ ದಾಖಲೆಗಳನ್ನು ಪರಿಶೀಲಿಸಿಲ್ಲ. ಹೀಗಾಗಿ ಇನ್ನೂ ಆ ಜಾಗ ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿವೆ. ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ 16 ಶಾಲೆಗಳಿಗೆ ಭೂದಾಖಲೆ ವಾಡಿಕೊಡಲು ಕಂದಾಯ ಇಲಾಖೆಗೆ ಮನವಿ ಮಾಡಲಾಗಿದೆ. 9 ಶಾಲೆಗಳ ಜಾಗ ಖಾಸಗಿಯವರ ಹೆಸರಿನಲ್ಲಿದೆ. 5 ಶಾಲೆಗಳ ದಾಖಲೆ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. 5 ಶಾಲೆಗಳ ಜಾಗ ಸರ್ಕಾರದ್ದಾಗಿದ್ದರೂ ಶಾಲೆ ಹೆಸರಿಗೆ ಪಹಣಿಯಾಗಿಲ್ಲ.

ಜಿಲ್ಲಾಧಿಕಾರಿ ನೇತೃತ್ವದ ತಂಡ ರಚಿಸಿ

ಶಾಲೆಗಳ ದಾಖಲೆ, ಪಹಣಿ ಸರಿಪಡಿಸಬೇಕಾದರೆ ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ರಚನೆಯಾಗಬೇಕಿದೆ. ಪ್ರತಿ ಶಾಲೆಗಳ ದಾಖಲೆಗಳಿಗೆ ಇರುವ ಅಡೆತಡೆಯನ್ನು ಜಿಲ್ಲಾಧಿಕಾರಿಗಳ ಮುತುವರ್ಜಿಯಲ್ಲಿ ಸಂಬಂಧಪಟ್ಟ ಕಂದಾಯ ಅಧಿಕಾರಿಗಳು ಸರಿಪಡಿಸುವ ಅಭಿಯಾನ ಆರಂಭವಾದರೆ ಒಂದಿಷ್ಟು ಸರ್ಕಾರಿ ಶಾಲೆಯ ಆಸ್ತಿ ಉಳಿಯುತ್ತದೆ ಎಂಬುವುದು ಶಿಕ್ಷಣಾಭಿವಾನಿಗಳ ಅಭಿಪ್ರಾಯವಾಗಿದೆ.

ಶಾಲಾ ದಾಖಲೆ ಮತ್ತು ಪಹಣಿಗಾಗಿ ಹಲವು ಬಾರಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಲಾಗಿದೆ. ಶಾಲೆ ಜಾಗಗಳ ದಾಖಲೆ ಸರಿಪಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಕೆಲವು ಕಡತಗಳು ಬಾಕಿ ಇದೆ. ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಅತಿಥಿ ಶಿಕ್ಷಕರನ್ನು ನೇಮಿಕೊಳ್ಳಲಾಗಿದೆ. ದಾಖಲೆ ಸರಿಪಡಿಸಲು ಅಗತ್ಯ ಇರುವ ಕ್ರಮಗಳನ್ನು ಮೇಲಧಿಕಾರಿಗಳ ವಾರ್ಗದರ್ಶನದಲ್ಲಿ ಮಾಡಲಾಗುವುದು. -ನಾಗೇಶ ಕೆ.ನಾಯ್ಕ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ https://www.vijayavani.net/venkataramana-institutes-foundation-day-celebration https://www.vijayavani.net/theatre-artist-ch-ramesh-kalladka-passes-away

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net