

ವಿಕ್ರಮ ನಾಡಿಗೇರ ಧಾರವಾಡ
ಸರ್ಕಾರಿ ಶಾಲೆಗಳ ಬಗ್ಗೆ ಜನಪ್ರತಿನಿಽಗಳು ಸಾಕಷ್ಟು ಮಾತನಾಡುತ್ತಾರೆ. ಆದರೆ ಅವುಗಳ ಸುಧಾರಣೆ, ಬೆಳವಣಿಗೆಗೆ ಕ್ರಮ ವಹಿಸುವುದು ಮಾತ್ರ ಅಷ್ಟಕ್ಕಷ್ಟೇ. ಜಿಲ್ಲೆಯಲ್ಲಿನ ಕೆಲ ಸರ್ಕಾರಿ ಶಾಲೆಗಳಿಗೆ ಸ್ವಂತ ಸೂರು ಇಲ್ಲದಿರುವುದೇ ಇದಕ್ಕೆ ಸಾಕ್ಷಿ.
ಹೌದು. ಜಿಲ್ಲೆಯಲ್ಲಿ ಒಟ್ಟು ೮೪೭ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿವೆ. ಇವುಗಳಲ್ಲಿ ಒಟ್ಟು ೧೫ ಶಾಲೆಗಳಿಗೆ ಸ್ವಂತ ಕಟ್ಟಡಗಳೇ ಇಲ್ಲ. ಇದರಲ್ಲಿ ಬಹುರ್ತಕ ಉರ್ದು ಮಾಧ್ಯ ಶಾಲೆಗಳೇ ಸೇರಿವೆ. ಕಳೆದ ೨-೩ ವರ್ಷಗಳ ಹಿಂದೆ ೧೮ ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಪ್ರಸ್ತುತ ೧೫ ಶಾಲೆಗಳು ಮಾತ್ರ ಬಾಡಿಗೆ ಕಟ್ಟಡದಲ್ಲಿ ಇರುವುದು ಕೊಂಚ ಸಮಾಧಾನದ ಸಂಗತಿ. ಇದೇ ಕಾರಣಕ್ಕೆ ಸರ್ಕಾರಿ ಶಾಲೆಗಳು ಹೆಚ್ಚು ಮಕ್ಕಳನ್ನು ಆಕರ್ಷಿಸಲು ಹಿಂದೆ ಬೀಳುವಂತಾಗಿದೆ.
ಜಿಲ್ಲೆಯ ತಾಲೂಕು ಕೇಂದ್ರದ ಎಲ್ಲ ಶಾಲೆಗಳಿಗೂ ಸ್ವಂತ ಕಟ್ಟಡಗಳಿವೆ. ಆದರೆ ಹು-ಧಾ ನಗರ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳಿಗೆ ಕಟ್ಟಡ ಇಲ್ಲವಾಗಿದೆ. ಇದಕ್ಕೆ ಜಾಗದ ಕೊರತೆಯೂ ಕಾರಣ ಎನ್ನಲಾಗಿದೆ. ನಗರ ಪ್ರದೇಶದಲ್ಲಿ ಜಾಗ ಸಿಗುತ್ತಿಲ್ಲ. ಇನ್ನು ಸದ್ಯ ಶಾಲೆ ಇರುವ ಸ್ಥಳಕ್ಕಿಂತ ದೂರದ ಪ್ರದೇಶದಲ್ಲಿ ಜಾಗ ಪಡೆದರೆ ವಿದ್ಯಾರ್ಥಿಗಳು ಬರಲು ಸಮಸ್ಯೆ ಉಂಟಾಗಲಿದೆ. ಹೀಗಾಗಿ ಶಾಲೆಗಳನ್ನು ಬಾಡಿಗೆ ಕಟ್ಟಡದಲ್ಲೇ ನಡೆಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿಲ್ಲ.
ಸರ್ಕಾರಿ ಶಾಲೆಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸರ್ಕಾರಕ್ಕೆ ಅನುದಾನದ ಕೊರತೆಯದ್ದೇ ನೆಪ. ಆದರೆ ಇಚ್ಛಾಶಕ್ತಿ ಇದ್ದರೆ ದಾರಿ ಅನೇಕ. ಕಾರ್ಪೊರೇಟ್ ಕಂಪನಿಗಳ ಸಿಎಸ್‌ಆರ್, ವಿವಿಧ ಸಂಘ-ಸ0ಸ್ಥೆಗಳ ಸಹಕಾರ ಪಡೆಯಬಹುದು. ಇದಕ್ಕೂ ಮಿಗಿಲಾಗಿ ಸರ್ಕಾರಿ ಶಾಲೆಗಳಲ್ಲಿ ಕಲಿತ ಅನೇಕರು ಉನ್ನತ ಹುದ್ದೆಗಳಲ್ಲಿದ್ದಾರೆ. ಅವರನ್ನು ಸಂಪರ್ಕಿಸಿ ಗಟ್ಟಿ ಯೋಜನೆ ರೂಪಿಸಿದರೆ ಐದಾರು ವರ್ಷಗಳಲ್ಲಿ ಎಲ್ಲ ಶಾಲೆಗಳಿಗೆ ಸ್ವಂತ ಕಟ್ಟಡ ಸಿಗುವುದು ನಿಶ್ಚಿತ. ಇಂತಹ ಕಾರ್ಯಕ್ಕೆ ಸರ್ಕಾರ ಆಸಕ್ತಿ ತೋರುವುದೇ ಎಂಬುದೇ ಪ್ರಶ್ನೆ.
ಭಾಡಿಗೆ ಕಟ್ಟಡ ಶಾಲೆಗಳ ವಿವಿರ: ಧಾರವಾಡ ಮಾಳಾಪುರದ ಎಚ್‌ಪಿಯುಎಸ್ ಶಾಲೆ, ಜನ್ನತನಗರದ ಎಲ್‌ಪಿಯುಎಸ್, ರಸೂಲಪುರದ ಎಚ್‌ಪಿಯುಎಸ್ ನಂ.೭, ಬಾರಾ ಇಮಾಮಗಲ್ಲಿಯ ಎಚ್‌ಪಿಯುಎಸ್ ನಂ.೫, ಬಾರಾಕೋಟ್ರಿಯ ಎಲ್‌ಪಿಎಸ್, ಸತ್ತೂರಿನ ಎಲ್‌ಪಿಎಸ್, ಹುಬ್ಬಳ್ಳಿ ಗ್ರಾಮೀಣದಲ್ಲಿ ಬೆಂಗೇರಿಯ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆ, ಹುಬ್ಬಳ್ಳಿ ಶಹರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಽವಾಡ, ಆಸಾರ ಓಣಿಯ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ, ನಾರಾಯಣ ಸೋಫಾ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಬೀರಬಂದ ಸರ್ಕಾರಿ ಉರ್ದು ಗಂಡು ಮಕ್ಕಳ ಶಾಲೆ ನಂ. ೭, ಸರ್ಕಾರಿ ಉರ್ದು ಹಿರಿಯ ಪ್ರಾಥಮಿ ರೈಲ್ವೆ ಶಾಲೆ, ಯಲ್ಲಾಪುರ ಸರ್ಕಾರಿ ಉರ್ದು ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂ. ೪, ಕಿಲ್ಲಾ ಓಣಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬಹಾರಬಾಡ ಸರ್ಕಾರಿ ಉರ್ದು ಮಾದರಿ ಶಾಲೆ ನಂ. ೨ ಶಾಲೆಗಳು ಭಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಸ್ವಂತ ಕಟ್ಟಡ ಇಲ್ಲದ ಕಾರಣ ಜಿಲ್ಲೆಯಲ್ಲಿ ೧೫ ಶಾಲೆಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಸದ್ಯ ಶಾಲೆಗಳು ನಡೆಯುತ್ತಿರುವ ಪ್ರದೇಶದಲ್ಲಿ ಜಾಗದ ಕೊರತೆ ಇದೆ. ಇನ್ನು ಬೇರೆ ಪ್ರದೇಶದಲ್ಲಿ ಜಾಗ ಹುಡುಕಿ ಕಟ್ಟಡ ನಿರ್ಮಿಸಿದರೆ ಮಕ್ಕಳು ಶಾಲೆಗೆ ಆಗಮಿಸಲು ಸಮಸ್ಯೆ ಆಗಲಿದೆ. ಹೀಗಾಗಿ ಬಾಡಿಗೆ ಕಟ್ಟಡಗಳಲ್ಲೇ ಶಾಲೆಗಳನ್ನು ನಡೆಸಲಾಗುತ್ತಿದೆ.*ಎಸ್.ಎಸ್. ಕೆಳದಿಮಠ, ಡಿಡಿಪಿಐ