ಸರ್ಕಾರಿ ಶಾಲೆಗಳು ಬಡ ಮಕ್ಕಳ ಪ್ರಗತಿಗೆ ಬುನಾದಿ

CLK PU COLLEGE 19
Published on

ಚಳ್ಳಕೆರೆ: ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬುನಾದಿ ಆಗಿರುವ ಸರ್ಕಾರಿ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ನಗರದ ಸೋಮಗುದ್ದು ರಸ್ತೆಯಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕ್ರೀಡಾ, ಸಾಂಸ್ಕೃತಿಕ ಮತ್ತು ಎನ್ನೆಸ್ಸೆಸ್ ಘಟಕ ಸಮಾರಂಭವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ಪ್ರಸಕ್ತ ವರ್ಷದಲ್ಲಿ 1400 ವಿದ್ಯಾರ್ಥಿಗಳ ದಾಖಲಾತಿ ಇರುವುದು ಸ್ವಾಗತಾರ್ಹ. ಕಳೆದ 5 ವರ್ಷದ ಫಲಿತಾಂಶಕ್ಕಿಂತ ಪ್ರಸ್ತುತ ಫಲಿತಾಂಶ ಸುಧಾರಣೆ ಆಗಿದೆ. 2023-24ನೇ ಸಾಲಿನಲ್ಲಿ ಅತಿ ಹೆಚ್ಚಿನ ಫಲಿತಾಂಶಕ್ಕೆ ಉಪನ್ಯಾಸಕರು ಶ್ರಮಿಸಬೇಕು ಎಂದು ತಿಳಿಸಿದರು.

ಪ್ರಾಚಾರ್ಯ ಎಂ.ರವೀಶ್ ಮಾತನಾಡಿ, ಮಕ್ಕಳ ಶಿಕ್ಷಣ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಅನುಕೂಲಕ್ಕೆ ಒಳ ಕ್ರೀಡಾಂಗಣ ಮತ್ತು ರಂಗಮಂದಿರ ನಿರ್ಮಾಣ ಮಾಡಿಕೊಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.

ಇದೇ ವೇಳೆ ಅತಿಥಿ ಉಪನ್ಯಾಸಕರು ಮನವಿ ಸಲ್ಲಿಸಿ, ವೇತನ ಹೆಚ್ಚಳಕ್ಕೆ ಸರ್ಕಾರದ ಹಂತದಲ್ಲಿ ಪ್ರಸ್ತಾಪ ಮಾಡಬೇಕು ಎಂದು ಕೋರಿದರು.

ತಾಪಂ ಮಾಜಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಮಾಜಿ ಸದಸ್ಯ ಟಿ.ಗಿರಿಯಪ್ಪ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇಂದ್ರ, ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್.ಲಕ್ಷ್ಮಣ್, ಸದಸ್ಯರಾದ ಸುಮಕ್ಕ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಚನ್ನಾಗನಹಳ್ಳಿ ರುದ್ರಮುನಿ, ಗುರುನಾಥ್ ಗುಪ್ತಾ, ಜ್ಯೋತಿ, ಎಸ್.ಕೋಣಪ್ಪ, ಉಪನ್ಯಾಸಕರಾದ ಕೆ.ಎನ್.ವಸಂತಕುಮಾರ್, ನಾಗರಾಜ ಬೆಳಘಟ್ಟ, ಎಚ್.ಆರ್.ಜಬೀವುಲ್ಲಾ, ಎನ್.ಈರಣ್ಣ, ಬಿ.ಶಾಂತಕುಮಾರಿ, ಕೆ.ವಿ.ಚಂದ್ರಶೇಖರ್, ಟಿ.ಲಲಿತಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net