ಗಾಂಧಿವಾದಿ ಓದಿದ ಸರ್ಕಾರಿ ಶಾಲೆಗೆ ಮೇಲ್ದರ್ಜೆಯ ಭಾಗ್ಯ, ಸರ್ಕಾರದ ನಿರ್ಧಾರಕ್ಕೆ ಸಂತಸ

IMG_20251017_225157.jpg
Published on

ಚಿಕ್ಕಬಳ್ಳಾಪುರ: ಶಿಕ್ಷಣ ತಜ್ಞ,  ಪದ್ಮಭೂಷಣ, ಗಾಂಧಿವಾದಿ ಡಾ.ಎಚ್.ನರಸಿಂಹಯ್ಯನವರು ಓದಿದ ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಮಾರ್ಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ವರ್ಷದಿಂದ ವರ್ಷಕ್ಕೆ ಸರಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ ಕೆ ಜಿಯಿಂದ ಪಿಯುಸಿಯವರೆಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕದಲ್ಲಿ 200 ಹಾಗೂ ರಾಜ್ಯದ ಇತರೆಡೆ 500 ಸರಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸುತ್ತಿದೆ. ಈ ಪೈಕಿ ಡಾ.ಎಚ್.ನರಸಿಂಹಯ್ಯನವರ ತವರೂರು ಹೊಸೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ನಗರದ ಸರಕಾರಿ ಪದವಿ ಪೂರ್ವ ಕಾಲೇಜು ಕೂಡ ಸೇರ್ಪಡೆಯಾಗಿದೆ.

*ಬೇಡಿಕೆಗೆ ಸ್ಪಂದಿಸಿದ ಸರ್ಕಾರ*
ಇತ್ತೀಚೆಗಷ್ಟೇ ಡಾ.ಎಚ್.ನರಸಿಂಹಯ್ಯನವರ ಜನ್ಮ ಶತಾಬ್ಧಿಯನ್ನು ಹೊಸೂರು ಗ್ರಾಮದಲ್ಲಿ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದ್ದರು. ಈ ಸಂದರ್ಭದಲ್ಲಿ ನರಸಿಂಹಯ್ಯನವರು ಓದಿದ ಸರಕಾರಿ ಶಾಲೆಯನ್ನು ಮೇಲ್ದರ್ಜೆಗೇರಿಸಬೇಕು. ಹೆಚ್ಚಿನ ಅನುದಾನ ಒದಗಿಸಿ ಅಭಿವೃದ್ಧಿಪಡಿಸಬೇಕು ಎಂದು ಸರ್ಕಾರಕ್ಕೆ ಭಿನ್ನವತ್ತಳೆ ಸಲ್ಲಿಸಿದ್ದರು. ಈಗ ಶಾಲೆಯನ್ನು ಮೇಲ್ದರ್ಜೆಗೇರಿಸಲು ತೀರ್ಮಾನಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ  ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಚ್.ವಿ ಲ.ಮಂಜುನಾಥ್ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಅನೇಕ ಬಾರಿ  ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ
ಒತ್ತಾಯಿಸಿದ್ದರು.
ಈ ಹಿಂದೆ  ಮೂರು ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿ ಇನ್ನು ಮುಂದಿನ ದಿನಗಳಲ್ಲಿ  ಎರಡು ಕೋಟಿ ರೂ.ಗಳ ಅನುದಾನವನ್ನು ಒದಗಿಸುವುದಾಗಿ  ಭರವಸೆ  ನೀಡಿದ್ದರು.
ಶಾಲೆಯ ಗುಣಮಟ್ಟ ಹೆಚ್ಚಿಸಲು ಹಿರಿಯ ವಿದ್ಯಾರ್ಥಿಗಳು ಮತ್ತು ಸಮುದಾಯ ಮಾಡುತ್ತಿರುವ ಪ್ರಯತ್ನಕ್ಕೆ ಇದರಿಂದ ಬಲ ಬಂದಿದೆ .
ಶಾಲೆಯಲ್ಲಿ ಈಗಾಗಲೇ ಹಿರಿಯ ವಿದ್ಯಾರ್ಥಿಗಳ ಸಂಘ    ಕಳೆದ ಒಂದು ವರ್ಷದಿಂದ ಐದು ಜನ ಶಿಕ್ಷಕರನ್ನ  ನೇಮಿಸಿಕೊಂಡು ಎಲ್ ಕೆ ಜಿ ಮತ್ತು ಯುಎಲ್ ಕೆ ಜಿ ತರಗತಿಯನ್ನ  ಪ್ರಾರಂಭಿಸಿದ್ದು 58 ಮಕ್ಕಳು ದಾಖಲಾತಿಯನ್ನು ಪಡೆದಿದ್ದು ಶಿಕ್ಷಕರಿಗೆ ವೇತನವನ್ನು  ಹಿರಿಯ ವಿದ್ಯಾರ್ಥಿಗಳ ಸಂಘ ನೀಡುತ್ತಿದೆ. 
ಹಾಲಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 8 ನೇ ತರಗತಿವರೆಗೆ 349 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net