ಬುದ್ಧಿವಂತ ಶಿಕ್ಷಕನಾದ 2ನೇ ಮದುವೆ; ಕೋರ್ಟ್‌ನಿಂದ ಬಿದ್ದು ಇಬ್ಬರಿಗೂ ಜೈಲು ಶಿಕ್ಷೆ

High court logo
Published on

ರಾಣೆಬೆನ್ನೂರ: 2ನೇ ಮದುವೆ ಮಾಡಿಕೊಂಡ ಸರ್ಕಾರಿ ಶಾಲೆ ಶಿಕ್ಷಕನಿಗೆ ಹಾಗೂ ಆತನನ್ನು ಮದುವೆ ಮಾಡಿಕೊಂಡ ಮಹಿಳೆಗೆ 1 ವರ್ಷ ಜೈಲು ಶಿಕ್ಷೆ ಹಾಗೂ 9 ಸಾವಿರ ರೂ. ದಂಡ ವಿಧಿಸಿ ಇಲ್ಲಿಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಬಿ. ಸಿದ್ದರಾಜು ಶುಕ್ರವಾರ ತೀರ್ಪು ನೀಡಿ ಆದೇಶಿಸಿದ್ದಾರೆ.
ತಾಲೂಕಿನ ಬೆನಕನಕೊಂಡ ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕ ಚಮನಸಾಬ ಮೌಲಾಸಾಬ ರಾಣೆಬೆನ್ನೂರ ಹಾಗೂ ಈತನ 2ನೇ ಪತ್ನಿ ತಾಲೂಕಿನ ಮೈದೂರು ಗ್ರಾಮದ ಜುಬೇದಾ ಶಿಕ್ಷೆಗೊಳಗಾದ ಅಪರಾಧಿಗಳು.
ಚಮನಸಾಬ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. 2010 ಏಪ್ರೀಲ್ 18ರಂದು ಬ್ಯಾಡಗಿ ತಾಲೂಕಿನ ಮಲ್ಲೂರ ಗ್ರಾಮದ ಸಾಹಿರಾಬಾನು ಎಂಬುವಳನ್ನು ಮದುವೆ ಮಾಡಿಕೊಂಡಿದ್ದ. ಆದರೆ, ಮೂರ‌್ನಾಲ್ಕು ವರ್ಷ ಚನ್ನಾಗಿ ನೋಡಿಕೊಂಡು ಅವಳಿಗೆ ಇಬ್ಬರು ಹೆಣ್ಣು ಮಕ್ಕಳು ಹುಟ್ಟಿದ ಬಳಿಕ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತ ಬಂದಿದ್ದ. ರಾತ್ರಿ ಸಮಯದಲ್ಲಿ ಪತ್ನಿಗೆ ಹೊಡೆದು ನಿನ್ನನ್ನು ಕೊಂದು ನಾನು ಬೇರೊಂದು ಮದುವೆ ಮಾಡಿಕೊಳ್ಳುತ್ತೇನೆ ಎಂದು ಜೀವ ಬೆದರಿಕೆ ಕೂಡ ಹಾಕಿದ್ದ.
ಅಲ್ಲದೆ ಪತ್ನಿ ಹಾಗೂ ಮಕ್ಕಳನ್ನು ಹಬ್ಬಕ್ಕೆಂದು ತವರು ಮನೆಗೆ ಕಳುಹಿಸಿ ಅವರನ್ನು ವಾಪಸ್ ಕರೆದುಕೊಂಡು ಬರದೆ 2019 ಜುಲೈ 8ರಂದು ಮೈದೂರು ಗ್ರಾಮದ ಜುಬೇದಾ ಎಂಬುವವಳನ್ನು 2ನೇ ಮದುವೆ ಮಾಡಿಕೊಂಡಿದ್ದ. ಈ ಕುರಿತು 1ನೇ ಪತ್ನಿ ನ್ಯಾಯಾಲಯದ ಮೋರೆ ಹೋಗಿದ್ದಳು.
ಸಾಕ್ಷಾೃಧಾರಗಳ ಸಮೇತ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮಧುಮತಿ ಸಿದ್ನೂರಕರ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net