

ಪರಶುರಾಮಪುರ: ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಅನೇಕ ಯೋಜನೆ ಜಾರಿಗೊಳಿಸಿದೆ. ಈ ಆಶಯ ಈಡೇರಿಕೆಗೆ ಮುಖ್ಯವಾಗಿ ಜನರ ಸಹಕಾರ ಬೇಕು ಎಂದು ಮುಖ್ಯಶಿಕ್ಷಕ ಎಸ್.ವೆಂಕಟೇಶ ಹೇಳಿದರು.
ಚಿತ್ರದುರ್ಗ ತಾಲೂಕು ಜೆ.ಎನ್.ಕೋಟೆ ಕ್ಲಸ್ಟರ್ ವ್ಯಾಪ್ತಿಯ ಸಜ್ಜನಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಿಕ್ಷಣ ಇಲಾಖೆ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರಿ ಶಾಲೆಗಳನ್ನು ಬಡವರು, ಅಹಿಂದ ವರ್ಗದವರು ಹೆಚ್ಚು ಅವಲಂಬಿಸಿದ್ದಾರೆ. ಆದರೆ, ಈಚೆಗೆ ಖಾಸಗಿ ಶಾಲೆ ವ್ಯಾಮೋಹ ಹೆಚ್ಚಾಗುತ್ತಿದ್ದು, ಸಾಲ ಮಾಡಿ ಮಕ್ಕಳನ್ನು ಕಾನ್ವೆಂಟ್‌ಗಳಿಗೆ ಕಳುಹಿಸಲಾಗುತ್ತಿದೆ. ವಾಸ್ತವವಾಗಿ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಯಲ್ಲಿ ದೊರೆಯುತ್ತದೆ. ಈ ಕುರಿತು ಪಾಲಕರು ಅರಿತುಕೊಳ್ಳಬೇಕು ಎಂದರು.
ರ‌್ಯಾಂಕ್ ಗಳಿಸಿದ ಪ್ರತಿಭಾನ್ವಿತರು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜತೆಗೆ ಪಠ್ಯಪುಸ್ತಕ, ಬಿಸಿಯೂಟ, ಸೈಕಲ್, ಶೂ, ಬಟ್ಟೆ ಸೇರಿ ಅನೇಕ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತದೆ. ಆರ್ಥಿಕ ಹೊರೆಯಿಲ್ಲದೆ ಮಕ್ಕಳಿಗೆ ಶಿಕ್ಷಣ ಕೊಡುವ ವ್ಯವಸ್ಥೆಗೆ ಪಾಲಕರ ಸಹಕಾರ ಬೇಕು ಎಂದು ತಿಳಿಸಿದರು.
ಎಲ್ಲ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ವಿತರಿಸಲಾಯಿತು ಸಿಆರ್‌ಪಿ ವೆಂಕಟೇಶ, ಪಾಪಣ್ಣ ರೆಡ್ಡಿ, ಶಿಕ್ಷಕರಾದ ಸತೀಶ, ನಿರ್ಮಲಾ, ಲಕ್ಷ್ಮೀಪತಿ, ರವಿ, ಬಿಸಿಯೂಟ ಕಾರ್ಯಕರ್ತೆರಾದ ದಾಕ್ಷಾಯಣಮ್ಮ, ಗಿರಿಜಾ ಹಾಗೂ ಪಾಲಕರು ಉಪಸ್ಥಿತರಿದ್ದರು.