

ಚಿತ್ರದುರ್ಗ: ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಮುದಾಯದ ಪಾಲ್ಗೊಳ್ಳುವಿಕೆ ಬಹಳ ಮುಖ್ಯ ಎಂದು ಮುಖ್ಯಶಿಕ್ಷಕ ಎಸ್.ವೆಂಕಟೇಶ್ ಅಭಿಪ್ರಾಯಪಟ್ಟರು.
ಶಾಲೆಯ ಬಿಸಿಯೂಟ ಕಾರ್ಯಕರ್ತೆ ಎನ್.ದಾಕ್ಷಾಯಣಮ್ಮ ಅವರು ಸಜ್ಜನಕೆರೆ ಗ್ರಾಮದ ಸಹಿಪ್ರಾ ಶಾಲೆಗೆ ಸೋಮವಾರ ಕೊಡುಗೆ ನೀಡಿದ ಆಲ್ಮೇರಾ, ಮೇಜು ಮತ್ತಿತರ ಪೀಠೋಪಕರಣಗಳನ್ನು ಸ್ವೀಕರಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿ ಸರ್ಕಾರದ ಕೆಲಸವಷ್ಟೇ ಎಂಬ ಮನಸ್ಥಿತಿ ಸರಿಯಲ್ಲ. ಸ್ಥಳೀಯರು, ಉಳ್ಳವರು, ದಾನಿಗಳು ಅಗತ್ಯ ಸಹಕಾರ, ಪ್ರೋತ್ಸಾಹ ನೀಡಿದರೆ ಶೈಕ್ಷಣಿಕ ಕ್ಷೇತ್ರದ ಬಲವರ್ಧನೆಗೊಳ್ಳಲಿದೆ. ಜತೆಗೆ ನಮ್ಮ ಮಕ್ಕಳು ಕಲಿಕೆಯಲ್ಲಿ ಪ್ರಗತಿ ಸಾಧಿಸಿ, ಊರಿನ ಕೀರ್ತಿ ಹೆಚ್ಚಿಸಲಿದ್ದಾರೆ ಎಂದರು.
ಉದ್ಯೋಗ ಭದ್ರತೆ ಹೊಂದಿಲ್ಲದ ಕಡಿಮೆ ವೇತನ ಪಡೆಯುವ ನಮ್ಮ ಶಾಲೆಯ ಬಿಸಿಯೂಟ ಕಾರ್ಯಕರ್ತೆ ದಾಕ್ಷಾಯಣಮ್ಮ ಅವರು ತಾವು ಕೂಡಿಟ್ಟ ಹಣದಲ್ಲಿ ಶಾಲೆಯ ಪ್ರಗತಿಗೆ ಕೈಜೋಡಿಸಿರುವುದು ನಮ್ಮಂತಹ ಹಾಗೂ ಉಳ್ಳವರ ಕಣ್ತೇರಿಸುವ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಥಳೀಯವಾಗಿ ಬಹಳಷ್ಟು ಶ್ರೀಮಂತರು, ಜಮಿನ್ದಾರರು, ಉನ್ನತ ಉದ್ಯೋಗದಲ್ಲಿರುವ ಹಣವಂತರು ಇದ್ದಾರೆ. ಅವರೆಲ್ಲರೂ ನಮ್ಮೂರಿನ ಶಾಲೆ ಎಂಬ ಅಭಿಮಾನದಿಂದ ದಾನದ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಈ ಮೂಲಕ ಹುಟ್ಟೂರಿನ ಋಣ ತೀರಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಶಿಕ್ಷಕರಾದ ಸತೀಶಪ್ಪ, ನಿರ್ಮಲಮ್ಮ, ಶ್ರೀಲಕ್ಷ್ಮೀ, ರವಿ, ಶಾಲಾ ಅಡುಗೆ ಸಿಬ್ಬಂದಿ, ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.