

ಮೇಲುಕೋಟೆ: ಕವಿ ಪುತಿನ ವ್ಯಾಸಂಗ ಮಾಡಿದ ಶತಮಾನದ ಸರ್ಕಾರಿ ಶಾಲೆಯನ್ನು ಬಲವರ್ಧನೆ ಮಾಡಲು ಪುತಿನ ಟ್ರಸ್ಟ್ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಪ್ರೊ.ಕೃಷ್ಣೇಗೌಡ ತಿಳಿಸಿದರು.
ಕವಿ ಪುತಿನ ವ್ಯಾಸಂಗ ಮಾಡಿದ ಶಾಲೆಗೆ ಭೇಟಿ ನೀಡಿ ವೀಕ್ಷಿಸಿದ ನಂತರ ಮಾತನಾಡಿದರು. ಶಾಲೆ ಪರಿಸರ ಉತ್ತಮವಾಗಿದ್ದು, ಇಂತಹ ಶಾಲೆಯಲ್ಲಿ ಮಕ್ಕಳ ೊರತೆ ಎದುರಾಗಿರುವುದು ಆತಂಕಕಾರಿ ಬೆಳವಣಿಗೆ. ಮಕ್ಕಳ ದಾಖಲಾತಿಗೆ ಶ್ರಮವಹಿಸಬೇಕಿದ್ದು, ಸರ್ಕಾರದ ವತಿಯಿಂದ ಶಾಲೆಗೆ ಬೇಕಾದ ಸೌಲಭ್ಯ ಕೊಡಿಸಲು ಪ್ರಯತ್ನ ಮಾಡಲಾಗುವುದು ಎಂದರು.
ಪುತಿನ ಕಲಾಮಂದಿರದಲ್ಲಿ ಶಾಲಾ ವಾರ್ಷಿಕೋತ್ಸವ ಮಾಡಲು ಟ್ರಸ್ಟ್ ಸಹಕಾರ ನೀಡಲಿದ್ದು, ವಾರ್ಷಿಕೋತ್ಸವ ಅರ್ಥಪೂರ್ಣವಾಗಿ ನಡೆಯಬೇಕು ಎಂದರು.
ಇದೇ ವೇಳೆ ಮುಖ್ಯಶಿಕ್ಷಕರು ಹಾಗೂ ಸಹ ಶಿಕ್ಷಕರೊಡನೆ ಶಾಲಾಭಿವೃದ್ಧಿ ಮತ್ತು ಶಾಲೆಯ ಸ್ಥಿತಿಗತಿಯ ಬಗ್ಗೆ ಚರ್ಚಿಸಿ ಮಾಹಿತಿ ಪಡೆದರು. ಮುಖ್ಯ ಶಿಕ್ಷಕ ಸಂತಾನರಾಮನ್, ಪುತಿನ ಕಲಾಮಂದಿರ ವ್ಯವಸ್ಥಾಪಕ ವೆಂಕಟೇಶ್, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಕದಲಗೆರೆ ಶಿವಣ್ಣಗೌಡ, ಸಹಶಿಕ್ಷಕರಾದ ಮಹಾಲಕ್ಷ್ಮೀ, ಜಯಂತಿ, ಪೂರ್ಣಿಮ, ಶೃತಿ, ಗಿರಿಜಾ ಇದ್ದರು.
ಪುತಿನ ದಹನ ಸ್ಥಳದಲ್ಲಿ ಪಾರ್ಕ್: ಕವಿ ಪುತಿನ ದಹನ ಸ್ಥಳ ರಕ್ಷಣೆ ಮಾಡುವ ಕುರಿತು ಮಾತನಾಡಿದ ಕೃಷ್ಣೇಗೌಡರು, ಸರ್ಕಾರಿ ಬಾಲಕರ ಶಾಲೆಯ ಮೈದಾನದಲ್ಲಿ ಕವಿ ಪುತಿನ ದಹನ ಸ್ಥಳವಿದ್ದು, ಶಿಕ್ಷಣ ಇಲಾಖೆ ಹೆಸರಲ್ಲೇ ಇರಲಿ. ನಾವು ದಹನ ಸ್ಥಳದ ಸುತ್ತ ತುಳಸಿ-ಹೂವಿನ ಗಿಡಗಳನ್ನು ಬೆಳಸಿ ಅದೊಂದು ಪ್ರವಾಸಿ ತಾಣವಾಗುಂತೆ ಮಾಡೋಣ. ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಣ ಇಲಾಖೆ ಇದಕ್ಕೆ ಸಹಕಾರ ನೀಡಬೇಕು. ಟ್ರಸ್ಟ್‌ನ ಮೊದಲ ಸಭೆಯಲ್ಲೇ ಚರ್ಚಿಸಿ ಈ ನಿರ್ಣಯ ಮಾಡಿ ಶೀಘ್ರ ಅನುಷ್ಠಾನಕ್ಕೆ ತರಲಾಗುವುದು ಎಂದರು.