

ಕೋಲಾರ: ಲೋಕಸಭಾ ಸದಸ್ಯ ಎಂ.ಮಲ್ಲೇಶ್ಬಾಬು ತವರೂರು ಕುಂಬಾರಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಗೊಂಡಿದ್ದು, ಕಟ್ಟಡವನ್ನು ದುರಸ್ತಿಗೊಳಿಸಿ, ಕಾಂಪೌಂಡ್ ನಿರ್ಮಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಮಂಗಳವಾರ ಸಂಬಂಧಿಸಿದ ಗ್ರಾಮ ಪಂಚಾಯತಿ ಅಧಿಕಾರಿಗಳನ್ನು ಆಗ್ರಹಿಸುತ್ತಿದ್ದಾರೆ.
ಕುಂಬಾರಹಳ್ಳಿ ಶಾಲೆಯಲ್ಲಿ ಸುಮಾರು 30 ಮಕ್ಕಳು ಕಲಿಯುತ್ತಿದ್ದು, ಶಾಲಾ ಕಟ್ಟಡ ತೀರಾ ಹಳೆಯದಾಗಿದೆ. ಮಳೆ ಬಂದರೆ ನೀರು ಒಳಗೆ ಬರುತ್ತದೆ. ಕಟ್ಟಡವನ್ನು ದುರಸ್ತಿಗೊಳಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಮಧ್ಯೆ ಶಾಲೆಗೆ ಕಲ್ಲಿನ ಕಾಂಪೌಂಡ್ ಸದೃಢವಾಗಿದ್ದರೂ ಕೆಲವರು ಗೋಡೆಯನ್ನು ಕೆಡವಿ, ಮರು ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆದರೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಹಳೇ ಕಟ್ಟಡವನ್ನು ದುರಸ್ತಿಗೊಳಿಸಿ, ಕಾಂಪೌಂಡ್ ನಿರ್ಮಿಸಬೇಕು ಎಂದು ಗ್ರಾಮದ ಬಿ.ಎನ್.ಅನಂತಕುಮಾರ್, ವೆಂಕಟೇಶಪ್ಪ, ನಾರಾಯಣಸ್ವಾಮಿ, ಚಂಗಮ್ಮ ವೆಂಕಟೇಶಪ್ಪ, ಕೆ.ಎಚ್.ಮಂಜುನಾಥ, ನಾರಾಯಣಮ್ಮ, ರತ್ನಮ್ಮ, ಸೊಣ್ಣಪ್ಪ, ನಾಗರಾಜ, ಅಭಿಲಾಷ, ಅರುಣ್, ನವೀನ್, ಹರೀಶ್, ಕೆ.ಏನ್.ಗಂಗಾಧರ್, ರವಿ, ಕುಮಾರ್, ಪೆದ್ದಣ್ಣ, ಗೊಂದೋಡಿಪಲ್ಲಿ ವೆಂಕಟೇಶಪ್ಪ ಒತ್ತಾಯಿಸುತ್ತಿದ್ದಾರೆ.
ಸರ್ಕಾರಿ ಅನುದಾನವನ್ನು ದುರ್ಬಳಸಿಕೊಳ್ಳುವ ಉದ್ದೇಶದಿಂದ ಉತ್ತಮ ಕಾಂಪೌಂಡ್ಅನ್ನು ಕೆಡವಿದ್ದಾರೆ. ಶಾಲೆಯಲ್ಲಿ ಶೌಚಗೃಹ, ನೀರಿನ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಪರದಾಡುತ್ತಾರೆ. ಅಧಿಕಾರಿಗಳು ಇನ್ನಾದರೂ ಹಳೇ ಕಟ್ಟಡ ದುರಸ್ತಿಪಡಿಸಿ, ಶಾಲೆಗೆ ಮೂಲ ಸೌಕರ್ಯ ಕಲ್ಪಿಸಿಸಬೇಕು. - ಸುಶೀಲಾ ಗ್ರಾಪಂ ಮಾಜಿ ಸದಸ್ಯೆ