ಸರ್ಕಾರಿ ಶಾಲೆಗೆ ವರದಾನವಾದ ಕರೊನಾ!

17CBP1e
Published on

ಎನ್.ವೆಂಕಟೇಶ್ ಚಿಕ್ಕಬಳ್ಳಾಪುರ

ಕರೊನಾ ಹಿನ್ನೆಲೆಯಲ್ಲಿ ಶಾಲೆಗಳು ಬಾಗಿಲು ಮುಚ್ಚಿವೆ, ಆದರೆ ಈ ಬಿಡುವಿನ ವೇಳೆಯೇ ಮೂಲಸೌಲಭ್ಯಗಳ ಕೊರತೆಯಿಂದ ಗುಟುಕು ಜೀವ ಹಿಡಿದು ನರಳುತ್ತಿದ್ದ ಸರ್ಕಾರಿ ಶಾಲೆಗಳಿಗೆ ವರವಾಗಿದೆ. ಇದರಿಂದ ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳ ಚಿತ್ರಣವೇ ಬದಲಾಗುತ್ತಿದೆ...!

ಖಾಸಗಿ ಬೇಬಿ ಸಿಟ್ಟಿಂಗ್ ಸೆಂಟರ್‌ಗಳಿಗೆ ಪೈಪೋಟಿಯಾಗಿ ಜಿಲ್ಲೆಯ ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಿದ ಜಿಪಂ, ಈಗ ಅದೇ ಮಾದರಿಯಲ್ಲಿ ಸರ್ಕಾರಿ ಶಾಲೆಗಳಿಗೂ ಹೈಟೆಕ್ ಸ್ಪರ್ಶ ನೀಡುತ್ತಿದೆ, ಬಣ್ಣ ಮಾಸಿ ಕಾಲಗರ್ಭ ಸೇರಲು ತುದಿಗಾಲಲ್ಲಿ ನಿಂತಿದ್ದ ಶಾಲೆಗಳು ಹೊಸಜೀವ ಪಡೆಯುತ್ತಿವೆ. ಮತ್ತೆ ಗತವೈಭವಕ್ಕೆ ಮರಳಲು ಹವಣಿಸುತ್ತಿವೆ.

ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳ ಗೋಡೆಗಳು ಕಲಾಕೃತಿಗಳಿಂದ ಗಮನ ಸೆಳೆಯುತ್ತಿವೆ. ಹೊಸ ಕಲಿಕೋಪಕರಣಗಳು, ಪಿಠೋಪಕರಣಗಳು ತರಗತಿ ಕೊಠಡಿಗಳನ್ನು ಸೇರಿವೆ. ಜಾನುವಾರುಗಳ ಮೇವಿನ ಜಾಗದಂತಿದ್ದ, ಪುಂಡರ ಆಶ್ರಯ ತಾಣದಂತಿದ್ದ ಶಾಲೆಯ ಬಯಲು ಪ್ರದೇಶ ಸುಸಜ್ಜಿತ, ಸುರಕ್ಷತೆಯ ಶಾಲಾ ಮೈದಾನಗಳಾಗಿ ಪರಿವರ್ತನೆಯಾಗುತ್ತಿದೆ.

ಒಟ್ಟಿನಲ್ಲಿ ಖಾಸಗಿ ಶಾಲೆಗಳ ವ್ಯಾಮೋಹದಿಂದ ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುತ್ತಿದ್ದ, ಗೊಣಗುತ್ತಿದ್ದವರು ಇದೀಗ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವಂತೆ, ಇದೇನು ಖಾಸಗಿ ಶಾಲೆಯೋ ಎನ್ನುವಂತೆ ಬದಲಾಗುತ್ತಿದ್ದು, ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಸ್ವಾಗತಕ್ಕೆ ಸಂಭ್ರಮದಿಂದಲೇ ಸಜ್ಜಾಗುತ್ತಿವೆ.

ಮಾದರಿಯಾಗಿ 38 ಶಾಲೆಗಳ ಅಭಿವೃದ್ಧಿ : ಜಿಲ್ಲೆಯಲ್ಲಿ ಆರೋಗ್ಯ, ಶಿಕ್ಷಣಕ್ಕೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹೆಚ್ಚಿನ ಒತ್ತು ನೀಡಿದೆ. ಶಿಥಿಲಾವಸ್ಥೆಯಲ್ಲಿದ್ದ ಆಸ್ಪತ್ರೆ, ಶಾಲಾ ಕಟ್ಟಡಗಳ ದುಸ್ಥಿತಿ, ಸೌಲಭ್ಯಗಳ ಕೊರತೆ ಸೇರಿ ಹಲವು ಸಮಸ್ಯೆಗಳ ಮಾಹಿತಿ ತಿಳಿದುಕೊಂಡು ಬಗೆಹರಿಸಲಾಗುತ್ತಿದೆ. ಇದರ ನಡುವೆ ಜಿಪಂ 2020-21ನೇ ಸಾಲಿನಲ್ಲಿ ಮೊದಲ ಹಂತದಲ್ಲಿ 38 ಶಾಲೆಗಳನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿದೆ. ಹಲವು ರೀತಿಯ ಸೌಲಭ್ಯಗಳನ್ನು ಹೊಂದುವ ಮೂಲಕ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿದ್ದು ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಸಜ್ಜಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net