

ಕುಕನೂರು: ಶಾಲೆಗಳ ಪುನರಾರಂಭಕ್ಕೆ ಕೆಲವೆ ದಿನ ಬಾಕಿ ಇದ್ದು, ತಾಲೂಕಿನ ರ್ಯಾವಣಕಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಗ್ರಾಮದ ಯುವಕರೆಲ್ಲರೂ ಸೇರಿ ಒಂದೇ ದಿನದಲ್ಲಿ ಬಣ್ಣ ಹಚ್ಚಿ ಶೃಂಗರಿಸಿದರು.
ಮೂವತ್ತಕ್ಕೂ ಹೆಚ್ಚು ಯುವಕರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು. ಬಣ್ಣ ಬಳಿಯಲು ಯುವಕರೆಲ್ಲರೂ ಸ್ವಂತ ಹಣ ಹಾಕಿ 15 ಸಾವಿರ ರೂ.ಕ್ಕೂ ಹೆಚ್ಚು ವೆಚ್ಚ ಮಾಡಿದ್ದಾರೆ. ರೈತಾಪಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಸ್ಥಳೀಯ ಯುವಕರು ಮತ್ತು ಉದ್ಯೋಗದಲ್ಲಿರುವ ಗ್ರಾಮದ ಯುವಕರು ಶಾಲೆಗೆ ಬಣ್ಣ ಬಳಿಯುವ ಬಗ್ಗೆ ಚರ್ಚಿಸಿ ಬಿಡುವು ಮಾಡಿಕೊಂಡು ಈ ಕೆಲಸ ಮಾಡಿದ್ದಾರೆ. ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿ ಒಂದೇ ದಿನದಲ್ಲಿ ಬಣ್ಣ ಬಳಿದಿದ್ದಾರೆ.
ನಾವು ಇದೇ ಶಾಲೆಯಲ್ಲಿ ಕಲಿತ್ತಿದ್ದೆವು. ಕರೊನಾದಿಂದ ಶಾಲೆ ಆರಂಭಗೊಳ್ಳಲು ತಡವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶಾಲೆ ಆರಂಭಗೊಳ್ಳಬಹುದು. ಹೀಗಾಗಿ ಅದಕ್ಕೂ ಪೂರ್ವದಲ್ಲಿ ಮಾಸಿ ಹೋಗಿದ್ದ ಶಾಲೆಯ ಗೋಡೆಗಳಿಗೆ ಬಣ್ಣ ಬಳಿಸಲು ತೀರ್ಮಾನಿಸಿದೆವು. ಕಳೆದ ಆರು ತಿಂಗಳ ಬಳಿಕ ಶಾಲೆ ಪುನರಾರಂಭವಾಗುತ್ತಿದ್ದು, ಬರುವ ಮಕ್ಕಳು ಮಾಸಿದ ಗೋಡೆಗಳನ್ನು ಕಂಡು ಮನಸ್ಸು ಮುರಿಯಬಾರದು. ಜತೆಗೆ ಪಾಲಕರಿಗೆ ಮಕ್ಕಳನ್ನು ಸರ್ಕಾರಿ ಶಾಲೆಯತ್ತ ವಾಲಿಸಬೇಕು ಎನ್ನುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ಕೆ ನಾಂದಿ ಹಾಡಿದ್ದೇವೆ ಎನ್ನುತ್ತಾರೆ ಯುವಕರು.
ರ್ಯಾವಣಕಿ ಯುವಕರ ಕಾರ್ಯದಂತೆ ಪ್ರತಿ ಗ್ರಾಮದಲ್ಲಿ ಶಾಲೆಗಳು ಶೃಂಗಾರಗೊಂಡರೆ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುತ್ತವೆ.
ನಮ್ಮೂರಿನ ಶಾಲೆ ಎಂಬ ಅಭಿಮಾನ ನಮ್ಮಲ್ಲಿದೆ. ಈ ಕಾರಣಕ್ಕೆ ನಾವೇ ಒಂದಷ್ಟು ಯುವಕರು ಸೇರಿ ಹಣ ಸಂಗ್ರಹಿಸಿ ಬಣ್ಣಹಚ್ಚಲು ತೀರ್ಮಾನಿಸಿದೆವು.| ಸಂಗಮೇಶ ಬೆಲ್ಲದ್, ಯುವಕ, ರ್ಯಾವಣಕಿ ಗ್ರಾಮ