

ಗದಗ: ತಾಲೂಕಿನ ಹುಲಕೋಟಿ ಗ್ರಾಮ ಪಂಚಾಯಿತಿ ಜನರಿಗೆ ಉತ್ತಮ ಮೂಲಸೌಲಭ್ಯಗಳನ್ನು ಒದಗಿಸುವ ಮೂಲಕ ದೇಶಕ್ಕೆ ನಂಬರ್- 1 ಗ್ರಾಮ ಪಂಚಾಯಿತಿ ಎಂಬ ಪ್ರಶಸ್ತಿಗೆ ಮುಡಿಗೇರಿಸಿಕೊಂಡಿದೆ. ಇದೀಗ ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವುದರ ಜತೆಗೆ ಕಲಿಕೆ ಮಟ್ಟ ಹೆಚ್ಚಿಸಲು ವಿನೂತನ ಯೋಜನೆ ರೂಪಿಸಿದೆ. ತನ್ಮೂಲಕ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತಹ ಶೈಕ್ಷಣಿಕ ವಾತಾವರಣ ನಿರ್ವಿುಸಲಾಗಿದೆ.
ಹುಲಕೋಟಿ ಗ್ರಾಮದಲ್ಲಿ ಶ್ರೀಮಂತರೆ ವಾಸಿಸುವಂತಹ ಬಡಾವಣೆಯಲ್ಲಿ ಈ ಶಾಲೆಯಿದೆ. ಇಲ್ಲಿನ ಬಹುತೇಕ ಮಕ್ಕಳು ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. 1ರಿಂದ 5ನೇ ತರಗತಿ ಇರುವ ಸರ್ಕಾರಿ ಶಾಲೆಯಲ್ಲಿ 71 ಮಕ್ಕಳ ಹಾಜರಾತಿ ಇದೆ. ನಾಲ್ವರು ಶಿಕ್ಷಕರಿದ್ದಾರೆ. ಈ ಶಾಲೆಯ ಮುಖ್ಯಾಧ್ಯಾಪಕರ ಕ್ರಿಯಾಶೀಲತೆಯಿಂದ ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.
ವಿದ್ಯಾರ್ಥಿಗಳನ್ನು ಸೆಳೆಯಲು ಶಾಲೆ ಕೊಠಡಿಗಳಿಗೆ ರೈಲು ಬೋಗಿ ಮಾದರಿಯಲ್ಲಿ ಬಣ್ಣ ಹಚ್ಚಿ ಅಂದಗೊಳಿಸಲಾಗಿದೆ. ಸಾರ್ವಜನಿಕರು ಈ ಶಾಲೆಯ ಅಂದಕ್ಕೆ ಮೊರೆ ಹೋಗಿದ್ದು, ಅನೇಕರು ಇಲ್ಲಿಗೆ ಬಂದು ಮೊಬೈಲ್ ಸೆಲ್ಪಿ ತೆಗೆದುಕೊಳ್ಳುತ್ತಾರೆ. ಇದಕ್ಕೆ ಚುಕುಬುಕು ರೈಲು ಬಂಡಿ ಶಾಲೆಗೆ ಎಂದೇ ಕರೆಯಲಾಗುತ್ತಿದೆ.
ರೈಲು ಮಾದರಿಯ ಬಣ್ಣ, ಆಧುನಿಕ ಸೌಂಡ್ಬಾಕ್ಸ್, ವಿದ್ಯುತ್ ಸ್ಕೂಲ್ ಬೆಲ್, ಕಲರ್ಫುಲ್ ಪ್ರವೇಶದ್ವಾರ, ಕಲಿಕೆ ಕೊಠಡಿ, ಊಟದ ಕುಟೀರ, ಹೈಟೆಕ್ ಶೌಚಗೃಹ, ಗಣಕ ಯಂತ್ರ, ಮುದ್ರಣ ಯಂತ್ರ (ಪ್ರಿಂಟರ್), ಟ್ಯಾಬ್, ಗಣಿತ ಕಿಟ್, ನಲಿಕಲಿ ಕಿಟ್, ಕ್ರೀಡಾ ಸಾಮಗ್ರಿಗಳನ್ನು ಅನೇಕ ದಾನಿಗಳು ನೀಡಿದ್ದಾರೆ. ಶಾಲೆಯಲ್ಲಿ ಕುಡಿಯಲು ಶುದ್ಧ ನೀರಿನ ವ್ಯವಸ್ಥೆಯೂ ಇದೆ.
ಕಲಿಕಾ ಕುಟೀರದಲ್ಲಿ ಮಕ್ಕಳು ಆಡುತ್ತ, ಹಾಡುತ್ತ, ಕುಣಿಯುತ್ತ ಕಲಿಯುವ ಹವ್ಯಾಸ ರೂಢಿ ಮಾಡಲಾಗಿದೆ. ಮಕ್ಕಳನ್ನು ಬಂಧಿಯಾಗಿಟ್ಟು ಕಲಿಸುವುದಕ್ಕಿಂತ ಮಕ್ಕಳೊಂದಿಗೆ ಶಿಕ್ಷಕರು ಸಹ ಮಕ್ಕಳಾಗಿ ಕಲಿಸುತ್ತಾರೆ. ಇದು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೂ ಪೂರಕವಾಗಿದೆ. ಬೆರಳು ಗೊಂಬೆಗಳನ್ನು ಬಳಸಿ, ಮುಖವಾಡ ಹಾಕಿಸಿ ಹಾಡು ಹೇಳಿಸಿ ಕುಣಿಸುತ್ತ ಕಲಿಸುವುದು ಈ ಶಾಲೆಯ ವಿಶೇಷವಾಗಿದೆ. ಇಲ್ಲಿನ ಮಕ್ಕಳು ಉಲ್ಟಾ ಮಗ್ಗಿ ಹೇಳುವುದರಲ್ಲಿ ನಿಸ್ಸೀಮರಾಗಿದ್ದಾರೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಮುಂದಿದ್ದಾರೆ. ಈ ಶಾಲೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ನಲಿಕಲಿ ಯೋಜನೆಯಡಿ ಉತ್ತಮ ಶಾಲೆ ಪ್ರಶಸ್ತಿ ನೀಡಿದೆ.
ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರೆ ಹೆಚ್ಚು. ಆದರೆ, ಒಂದು ಸಲ ನಮ್ಮ ಶಾಲೆಗೆ ಭೇಟಿ ನೀಡಿ ಶಾಲಾಭಿವೃದ್ಧಿ ಮತ್ತು ಕಲಿಕೆ ವಿಧಾನ ನೋಡಬೇಕು. ಯಾವುದೇ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತಹ ಶಿಕ್ಷಣವನ್ನು ಇಲ್ಲಿ ನೀಡುತ್ತಿದ್ದೇವೆ.| ಎ.ವಿ. ಪ್ರಭುಮುಖ್ಯಾಧ್ಯಾಪಕ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹುಲಕೋಟಿ