

ದೇವದುರ್ಗ: ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಜತೆಗೆ ಮಧ್ಯಾಹ್ನ ಬಿಸಿಯೂಟ ಸೇರಿ ವಿವಿಧ ಸೌಲಭ್ಯ ಒದಗಿಸಲಾಗುತ್ತಿದೆ. ಈಗ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಎಲ್ಲ ಶಾಲೆಗಳಿಗೆ ಶುದ್ಧ ಕುಡಿವ ನೀರಿನ ಘಟಕ ಆರಂಭಿಸಿ ಪರಿಶುದ್ಧ ಜೀವಜಲ ನೀಡಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ ಹೇಳಿದರು.
ತಾಲೂಕಿನ ಖಾನಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶರ್ವಿನ್ ವಿಲಿಯಮ್ಸ್ ಸಂಸ್ಥೆ, ರೋಟರಿ ಕ್ಲಬ್ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ತಾಲೂಕಿನ 31ಸರ್ಕಾರಿ ಶಾಲೆಗಳಿಗೆ ಆರ್‌ಒ ಪ್ಲಾಂಟ್ ನೀಡಲಾಗಿದೆ. ಶಿಕ್ಷಕರು, ಎಸ್ಡಿಎಂಸಿ ಘಟಕವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಮಕ್ಕಳ ಆರೋಗ್ಯ ಕಾಪಾಡಬೇಕು. ಅಕ್ಷರ ದಾಸೋಹ, ಹಾಲು, ಮೊಟ್ಟೆ ಸೇರಿ ಪೌಷ್ಟಿಕ ಆಹಾರದ ಜತೆಗೆ ಶುದ್ಧ ಕುಡಿವ ನೀರು ನೀಡಲಾಗಿದೆ. ಮಕ್ಕಳು ಹಾಗೂ ಪಾಲಕರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು ಎಂದರು.
ಕ್ಷೇತ್ರ ಸಮನ್ವಯ ಅಧಿಕಾರಿ ಶಿವರಾಜ ಪೂಜಾರಿ ಮಾತನಾಡಿ, ತಾಲೂಕಿನ ಬಿ.ಗಣೇಕಲ್, ಖಾನಾಪುರ, ಹಿರೇರಾಯಕುಂಪಿ, ಕೆ.ಇರಬಗೇರಾ, ಯಲ್ಲದೊಡ್ಡಿ, ತಾಂಡಾ, ದರಿಯರದೊಡ್ಡಿ, ಕೊಂಪರದೊಡ್ಡಿ, ಕ್ವಾರೆದೊಡ್ಡಿ, ತುಗರದೊಡ್ಡಿ, ಕೊತ್ತದೊಡ್ಡಿ, ಮರಳದೊಡ್ಡಿ, ಮಲ್ಲಾಪುರ, ಸಮುದ್ರ, ಬಂಗರಬಂಡಿ ತಾಂಡಾ, ಮೈಲಾಪುರ ದೊಡ್ಡಿ, ಮೂಕನಾಯಕ ತಾಂಡಾ, ಸೂರ್ಯನಾಯಕ ತಾಂಡಾ, ಮುಂಡರಗಿ, ಗಣಜಲಿ ಸೇರಿ 31ಕಡೆ ಆರ್‌ಒ ಪ್ಲಾಂಟ್ ನೀಡಲಾಗಿದೆ. ಹಳ್ಳಿ, ದೊಡ್ಡಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ಪ್ರಮುಖರಾದ ಮಂಜುನಾಥ, ವೀರಬಸವನಗೌಡ, ಶಿವಲಿಂಗಪ್ಪ ಬಳೆ, ಸುರೇಶ ರಾಬರ್ಟ್, ರಾಜಶೇಖರ ಇತರರಿದ್ದರು.