ಸರ್ಕಾರಿ ಶಾಲೆಗಳಿಂದ ವಿದ್ಯಾರ್ಥಿಗಳ ಉನ್ನತೀಕರಣ: ಶಾಸಕ ರವಿಕುಮಾರ್ ಗಣಿಗ ಅಭಿಪ್ರಾಯ

Government school building inaugurated in Kannali village Mandya
Published on

ಮಂಡ್ಯ: ಸರ್ಕಾರಿ ಶಾಲೆಯ ಅಭಿವೃದ್ಧಿಯಿಂದ ವಿದ್ಯಾರ್ಥಿಗಳ ಉನ್ನತೀಕರಣ ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ಹಲವು ಸೌಲಭ್ಯ ನೀಡುತ್ತಿದ್ದು, ಇದನ್ನು ಬಳಸಿಕೊಂಡು ಸಾಧನೆ ಮಾಡಬೇಕು ಎಂದು ಶಾಸಕ ರವಿಕುಮಾರ್ ಗಣಿಗ ಕಿವಿಮಾತು ಹೇಳಿದರು.

ತಾಲೂಕಿನ ಕನ್ನಲಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ವತಿಯಿಂದ 1 ಕೋಟಿ ರೂ.ವೆಚ್ಚದಲ್ಲಿ 6 ಸುಸಜ್ಜಿತವಾದ ಕೊಠಡಿ ನಿರ್ಮಾಣ ಮಾಡಲಾಗಿದೆ. ಶಾಲೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಪವಿತ್ರ ಸ್ಥಳ. ಆದ್ದರಿಂದ ಪ್ರತಿ ವಿದ್ಯಾರ್ಥಿಯು ಓದಿನ ಕಡೆ ಗಮನ ಹರಿಸಿ ಅತ್ಯುತ್ತಮ ಅಂಕ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿ ಪಾಲಕರು ಹಾಗೂ ಶಾಲೆಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ಚಂದನ್, ಮುಖ್ಯಶಿಕ್ಷಕಿ ಸುಮಿತ್ರಾ, ಎಸ್‌ಡಿಎಂಸಿ ಅಧ್ಯಕ್ಷ ಧನಂಜಯ್, ಮುಖಂಡರಾದ ಚಂದ್ರಶೇಖರ್, ಮಲ್ಲರಾಜು ಇತರರಿದ್ದರು.

ರಸ್ತೆ ಅಭಿವೃದ್ಧಿಗೆ ಚಾಲನೆ: ತಾಲೂಕಿನ ಆಲಕೆರೆ ಗ್ರಾಮದಲ್ಲಿ 50 ಲಕ್ಷ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ರವಿಕುಮಾರ್ ಗಣಿಗ ಚಾಲನೆ ನೀಡಿದರು.

ನಂತರ ಮಾತನಾಡಿ, ವೀರಭದ್ರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಮಂಜೂರಾಗಿರುವ 50 ಲಕ್ಷ ರೂ.ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆಲಕೆರೆ ಗ್ರಾಮದಲ್ಲಿ ಹಲವು ವರ್ಷಗಳ ನಂತರ ವೀರಭದ್ರಸ್ವಾಮಿ ದೇವಸ್ಥಾನದ ಕೊಂಡೋತ್ಸವ ನಡೆಯುತ್ತಿದ್ದು, ಅದರ ಅಂಗವಾಗಿ ಕಾಮಗಾರಿ ನಡೆಯುತ್ತಿದೆ. ಆಲಕೆರೆಯಿಂದ ಕೀಲಾರ ಗ್ರಾಮದವರೆಗೂ ಒಂದು ಕೋಟಿ ರೂ.ವೆಚ್ಚದ ರಸ್ತೆ ಅಭಿವೃದ್ಧಿಗೆ ಟೆಂಡರ್ ಆಗಿದ್ದು, ಶೀಘ್ರವೇ ಚಾಲನೆ ನೀಡಲಾಗುವುದು. ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಜಾತ್ರಾ ಮಹೋತ್ಸವಕ್ಕೆ ಸಜ್ಜುಗೊಳಿಸಲಾಗುವುದು ಎಂದರು.

ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಆಲಕೆರೆ ಕೃಷ್ಣೇಗೌಡ, ಮುಖಂಡರಾದ ರವಿ, ಸತ್ಯಾನಂದ ಸ್ವಾಮಿ, ಪ್ರಶಾಂತ್, ಭೈರೇಶ್, ಸತೀಶ್, ಎನ್.ಶಿವಲಿಂಗಯ್ಯ, ವೀರಪ್ಪ, ತೇಜ, ಶ್ರೀನಿವಾಸ್, ಮಹಾದೇವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net