

ಬೇಲೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಡವರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಫಲಾನುಭವಿಗಳು ಇದರ ಸದೂಪಯೋಗ ಪಡೆಯಬೇಕು ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಹೇಳಿದರು.
ವಿಕಸಿತ ಭಾರತ ಸಂಕಲ್ಪ ಯಾತ್ರೆ ಹಾಗೂ ವಿಕಸಿತ ಭಾರತ ನಮ್ಮ ಸಂಕಲ್ಪ ಅಭಿಯಾನದಡಿ ಪುರಸಭೆ ಆವರಣದಲ್ಲಿ ಗುರುವಾರ ವಿವಿಧ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಡವರಿಗಾಗಿ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೆ ತರುತಿದ್ದು ಕೆಲವರಿಗೆ ದೊರಕುತಿದೆ. ಸರ್ಕಾರದ ಯೋಜನೆಗಳು ಸಕಾಲದಲ್ಲಿ ತಲುಪಬೇಕಾದರೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರ ಗುಡಿಸಲು ಮುಕ್ತ ಭಾರತ ಮಾಡುವ ಯೋಜನೆ ರೂಪಿಸಿದ್ದು ಅರ್ಹರು ಈ ಸೌಲಭ್ಯವನ್ನು ಪಡೆದು ಮನೆ ನಿರ್ಮಾಣಕ್ಕೆ ಮುಂದಾಗಬೇಕಿದೆ. ಕೇಂದ್ರ ಸರ್ಕಾರದ ಯೋಜನೆಯಡಿ ಬ್ಯಾಂಕ್‌ಗಳಲ್ಲೂ ಕೃಷಿಕರು, ಕೃಷಿ ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಸಾಲ ಸೌಲಭ್ಯ ಕೊಡುತ್ತಿದ್ದು ಇದನ್ನು ಬಳ ಕೊಳ್ಳಬೇಕಿದೆ ಎಂದರು.
ಪುರಸಭೆ ಸದಸ್ಯ ಬಿ.ಗಿರಿಶ್ ಮಾತನಾಡಿ, ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪಿದಾಗ ಮಾತ್ರ ಯೋಜನೆಗೆ ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಬೇಕು ಎಂದರು.
ತಾಪಂ ಇಒ ಸತೀಶ್, ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್, ಪುರಸಭೆ ಉಪಾಧ್ಯಕ್ಷೆ ದಿವ್ಯ ಗಿರೀಶ್, ಸದಸ್ಯರಾದ ರತ್ನಕ್ಕ, ಜಮಾಲೂದ್ದೀನ್, ಪ್ರಭಾಕರ್, ಉಷಾ, ಸೌಮ್ಯ, ಮುಖ್ಯಾಧಿಕಾರಿ ಸುಜಯ್ ಕುಮಾರ್, ಯುನಿಯನ್ ಬ್ಯಾಂಕ್ ವ್ಯವಸ್ಥಾಪಕ ವಿಕ್ಟರ್ ಸೇರಿದಂತೆ ಇತರರಿದ್ದರು.