ಸಾಮಾನ್ಯನಿಗೂ ತಲುಪುತ್ತಿದೆ ಸರ್ಕಾರದ ಯೋಜನೆ: ಬೈರತಿ ಬಸವರಾಜು

8
Published on


ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆ ತಲುಪುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅಭಿಪ್ರಾಯಪಟ್ಟರು.
ಕೆ.ಆರ್.ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಆಯೋಜಿಸಿರುವ ‘ಮೋದಿ ಯುಗ ಉತ್ಸವ’ದ ಆರನೇ ದಿನದ ಕಾರ್ಯಕ್ರಮದಲ್ಲಿ ಗುರುವಾರ ನಾನಾ ರೀತಿ ಸೌಲಭ್ಯವನ್ನು ವಿತರಿಸಿ ಮಾತನಾಡಿದರು.


ನಾನು ಬೆಂಗಳೂರಿನವನಾಗಿದ್ದರೂ ಇಂತಹ ಕಾರ್ಯಕ್ರಮ ಮಾಡಲು ಆಗುತ್ತಿಲ್ಲ. ಕ್ಷೇತ್ರದ ರಸ್ತೆ ಬದಿ ವ್ಯಾಪಾರಿಗಳಿಗೆ ಐಡಿ ಕಾರ್ಡ್ ಕೊಡುತ್ತಿರುವುದು, ಹೊಲಿಗೆ ಯಂತ್ರ ವಿತರಿಸುವ ಮೂಲಕ ಬದ್ಧತೆಯ ಜೀವನ ನಡೆಸಲು ನೆರವು ನೀಡುತ್ತಿರುವುದು ಶ್ಲಾಘನೀಯ ಎಂದರು.
ಮೈಸೂರು ಮಹಾನಗರಪಾಲಿಕೆ ಮಹಾತ್ಮ ಗಾಂಧೀಜಿ ನಗರ ವಿಕಾಸ ಯೋಜನೆಯಡಿ 150 ಕೋಟಿ ರೂ.ಗಳಲ್ಲಿ ಅಭಿವೃದ್ಧಿಗೆ ನೀಡಿದ್ದು, ಕೃಷ್ಣರಾಜ ಕ್ಷೇತ್ರಕ್ಕೆ 25 ಕೋಟಿ ರೂ.ನೀಡಿದ್ದೇವೆ. ಎಸ್‌ಎಚ್‌ಪಿ ಅಡಿಯಲ್ಲಿ 50 ಕೋಟಿ ರೂ.ನೀಡಿದ್ದೇವೆ. ಮಳೆ ಬಂದಾಗ ಅನಾಹುತ ನಿವಾರಿಸಲು 46 ಕೋಟಿ ರೂ. ನೀಡಿದ್ದೇವೆ. ಪಿಡಬ್ಲುೃಡಿಯಿಂದ ಸಿಎಂ ಮನವೊಲಿಸಿ 50 ಕೋಟಿ ರೂ.ನೀಡಿದ್ದು ಅದು ಸಹ ಚಾಲನೆ ಆಗಿದೆ. ಮುಡಾದಿಂದ ಒಟಿಎಂ ನಿರ್ಮಾಣಕ್ಕೆ 20 ಕೋಟಿ ರೂ.ಸೇರಿ ಇನ್ನಿತರ ಅಭಿವೃದ್ಧಿ ಕಾರ್ಯಕ್ಕೆ 35 ಕೋಟಿ ರೂ.ನೀಡಿದ್ದೇವೆ. ಕೆ.ಆರ್.ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ನೀಡಿದ್ದೇವೆ ಎಂದರು.


ಮೋದಿ ರಾಷ್ಟ್ರ ಕಂಡ ಅಪ್ರತಿಮ ನಾಯಕ. ಅವರ ಪಕ್ಷದಲ್ಲಿ ನಾನು ಸೇರಿ ಕೆಲಸ ಮಾಡುವುದಕ್ಕೆ ನನಗೆ ಹೆಮ್ಮೆಯಾಗಿದೆ. ರಾಮದಾಸ್ ಅವರು ಬಹಳ ಹಿಂದಿನಿಂದಲೂ ಮೋದಿಯವರೊಟ್ಟಿಗೆ ಇದ್ದಾರೆ. ನಾನು ಸೇರಿದ ಕೆಲವೇ ವರ್ಷಗಳಲ್ಲಿ ಅವರೊಟ್ಟಿಗೆ ವೇದಿಕೆ ಹಂಚಿಕೊಂಡಿರುವುದು ಸಂತಸ ತಂದಿದೆ. ಅವರ ಆದರ್ಶ ನಮಗೆ ಸ್ಫೂರ್ತಿದಾಯಕವಾಗಿದೆ ಎಂದರು.
ಮೈಸೂರು ನಗರಕ್ಕೆ 69 ಸಾವಿರ ಬಲ್ಬ್ ಅಳವಡಿಸಿದ್ದೇವೆ. ರಿಂಗ್ ರಸ್ತೆ ವಿದ್ಯುತ್ ಕತ್ತಲಲ್ಲಿತ್ತು. ನಾನು ಬಂದ ಬಳಿಕ ಅದರ ಸಮಸ್ಯೆ ಬಗೆಹರಿಸಿದ್ದೇವೆ. ನಗರದ ಕುಡಿಯುವ ನೀರಿಗೆ ಉಂಡುವಾಡಿ ಯೋಜನೆಗೆ 531 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದೇವೆ. ಕಬಿನಿಯಿಂದ ನೀರು ತರಲು 150 ಕೋಟಿ ರೂ.ಪ್ರಸ್ತಾವನೆ ಬಂದಿದೆ. ಅದು ಸಹ ಪ್ರಗತಿ ಹಂತದಲ್ಲಿದೆ ಎಂದರು.
ದಸರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ. ಮುಖ್ಯಮಂತ್ರಿಗಳು 15 ಕೋಟಿ ರೂ.ಗಳನ್ನು ರಸ್ತೆ ಅಭಿವೃದ್ಧಿಗೆ ನೀಡಿದ್ದಾರೆ. ಸಮೃದ್ಧಿಯಾಗಿ ರಾಜ್ಯದಲ್ಲಿ ಮಳೆಯಾಗಿದ್ದು, ಇದಕ್ಕೆ ನಾಡ ದೇವತೆ ಚಾಮುಂಡೇಶ್ವರಿಯ ಕೃಪೆಯಾಗಿದೆ ಎಂದರು.


ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಮೋದಿ ಅವರ ಇಚ್ಛೆಯಂತೆ ದೇಶದ ಸರ್ವೋತ್ತೋಮುಖ ಅಭಿವೃದ್ಧಿಯ ಚಿಂತನೆ ಇಟ್ಟುಕೊಂಡು ದಿನಕ್ಕೊಂದು ಅಭಿವೃದ್ಧಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಮೋದಿ ಎಂದರೆ ಅಭಿವೃದ್ಧಿ. ಇದಕ್ಕೆ ಇಂದು ನಗರಾಭಿವೃದ್ಧಿ ಸಚಿವರ ಮೂಲಕ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ.
‘ಕಿಚನ್ ಗಾರ್ಡನ್’ ಬೆಳೆಸಲು ಒಂದು ಸಾವಿರ ಮನೆಗಳನ್ನು ಗುರುತಿಸಿ ಆ ಮೂಲಕ ಆದಾಯ ಗಳಿಸುವ ನೂತನ ಕಾರ್ಯಕ್ರಮಕ್ಕೆ ಇಂದು ಚಾಲನೆ ಸಿಕ್ಕಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಸೆ ಕಟ್ಟಡೆಯ ವ್ಯಕ್ತಿ, ಕಸಗುಡಿಸುವವರಿಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೌಲಭ್ಯ, ಯೋಜನೆ ತಲುಪಿಸಬೇಕೆಂಬ ಕಾರ್ಯಕ್ಕೆ ಇಲ್ಲಿ ಚಾಲನೆ ನೀಡಲಾಗುತ್ತಿದೆ ಎಂದರು.


ನಗರಪಾಲಿಕೆಯಿಂದ 2 ಕೋಟಿ ರೂ.ವೆಚ್ಚದಲ್ಲಿ ಮೂರು ಎಕರೆ ಜಾಗದಲ್ಲಿ ‘ಶ್ವಾನಗಳ ಚಿಕಿತ್ಸೆ ಮತ್ತು ಪುನರ್ವಸತಿ ಕೇಂದ್ರ’, ನಗರಾಭಿವೃದ್ಧಿ ಪ್ರಾಧಿಕಾರದಿಂದ 61.55 ಕೋಟಿ ರೂ.ವೆಚ್ಚದಲ್ಲಿ 28 ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಇದರೊಟ್ಟಿಗೆ ಕಳೆದ ಕೋವಿಡ್‌ನಲ್ಲಿ ಸಂಘ-ಸಂಸ್ಥೆಗಳ ಜತೆಗೂಡಿ ಮಂಗಗಳ ನೆರವು ನೀಡಿದ್ದೆವು. ಹೀಗಾಗಿ ಕಂದಾಯ ಇಲಾಖೆಯಿಂದ ಮರು ವಸತಿ ಕೇಂದ್ರಕ್ಕೆ 4 ಎಕರೆ ಜಾಗವನ್ನು ಪಾಲಿಕೆಗೆ ಹಸ್ತಾಂತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. 2 ಕೋಟಿ ರೂ.ವೆಚ್ಚದಲ್ಲಿ ಅದನ್ನು ಸಹ ಅಭಿವೃದ್ಧಿ ಮಾಡಲಿದ್ದು, ಹೀಗೆ ಮನುಷ್ಯರು ಮಾತ್ರವಲ್ಲದೆ, ಪ್ರಾಣಿ, ಪಕ್ಷಿಗಳ ಅಭಿವೃದ್ಧಿಗೂ ಚಾಲನೆ ನೀಡುವ ಸುದಿನ ಇದಾಗಿದೆ ಎಂದರು.


ಪಾಲಿಕೆ ಲಕ್ಷ್ಮೀಕಾಂತ್ ರೆಡ್ಡಿ, ಮುಡಾ ಆಯುಕ್ತ ದಿನೇಶ್, ಬಿಜೆಪಿ ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷ ವಡಿವೇಲು, ನಗರಪಾಲಿಕೆ ಸದಸ್ಯರಾದ ಮಾ.ವಿ.ರಾಮಪ್ರಸಾದ್, ಬಿ.ವಿ.ಮಂಜುನಾಥ್, ಪಿ.ಟಿ.ಕೃಷ್ಣ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಓಂ ಶ್ರೀನಿವಾಸ್, ನಾಗೇಂದ್ರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರುದ್ರೇಶ, ಚಂಪಕಾ, ಸೌಮ್ಯ ಈಶ್ವರ, ಶಾರದಮ್ಮ ಈಶ್ವರ್, ಮುಡಾ ಸದಸ್ಯ ಲಿಂಗಣ್ಣ ಇದ್ದರು.

ಮೋದಿ ಜನ್ಮದಿನಕ್ಕೆ ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರ ವಿಶೇಷ ಉಡುಗೊರೆ ನೀಡಿದೆ. ಹಿಮಾಚಲ ಪ್ರದೇಶದ ಧರ್ಮಶಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ 8ರಿಂದ ಸಂಜೆ 7 ರವರೆಗೆ ಎರಡು ದಿನಗಳ ಕಾಲ ನಗರಾಭಿವೃದ್ಧಿ ಇಲಾಖೆಯ ಎಲ್ಲ ಐಎಎಸ್ 560 ಅಧಿಕಾರಿಗಳು ಅಲ್ಲಿ ಭಾಗವಹಿಸಿದ್ದರು. ಅಲ್ಲಿ ಮೋದಿಯವರ ಕಾರ್ಯವೈಖರಿ ಮೆಚ್ಚಿ ಇಲ್ಲಿನ ಅಧಿಕಾರಿಗಳು ರಾಜ್ಯ ನಗರಾಭಿವೃದ್ಧಿ ಕಚೇರಿಯನ್ನು ಬೆಳಗ್ಗೆ 8ಕ್ಕೆ ತೆರೆದು ಸೇವೆ ನೀಡುವ ಮೂಲಕ ಮೋದಿಗೆ ಜನ್ಮದಿನಕ್ಕೆ ವಿಶೇಷ ಉಡೂಗೊರೆ ನೀಡುತ್ತಿರುವುದು ರಾಜ್ಯವೇ ಮೆಚ್ಚುವ ಕೆಲಸವಾಗಿದೆ.ಎಸ್.ಎ.ರಾಮದಾಸ್, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net