

ಮೈಸೂರು: ಕರೊನಾ ಸೋಂಕಿನ ಪ್ರಕರಣದ ಕುರಿತು ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ನಂಜನಗೂಡಿನ ಜುಬಿಲೆಂಟ್ ಔಷಧ ಕಾರ್ಖಾನೆಯ ಪುನರಾರಂಭಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಬೆಂಗಳೂರಿನಲ್ಲಿ ಗುರುವಾರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಗತಿ ಪರಿಶೀಲಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯದಲ್ಲಿ ಎಲ್ಲ ಔದ್ಯೋಗಿಕ ಚಟುವಟಿಕೆಗಳು ಪ್ರಾರಂಭವಾಗಿದ್ದು, ಅಂತೆಯೇ ಕೋವಿಡ್-19ನಿಂದಾಗಿ ಮುಚ್ಚಲಾಗಿದ್ದ ಜುಬಿಲೆಂಟ್ ಕಾರ್ಖಾನೆಯನ್ನು ಸಹ ತೆರೆಯಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು. ಆ ಮೂಲಕ ಈ ಕಾರ್ಖಾನೆ ಪುನರಾರಂಭ ಕುರಿತು ಎದ್ದಿದ್ದ ಗೊಂದಲ ತಿಳಿಗೊಳಿಸಿ ಹಸಿರು ನಿಶಾನೆ ತೋರಿಸಿದಂತಾಗಿದೆ.
ಈವರೆಗೆ 92 ಕೋವಿಡ್ ಪ್ರಕರಣಗಳು ಪತ್ತೆಯಾಗಿರುವ ಮೈಸೂರು ಜಿಲ್ಲೆಯಲ್ಲಿ ಕರೊನಾ ಸೋಂಕು ಹರಡಲು ಈ ಕಾರ್ಖಾನೆಯ ಕಾಣಿಕೆ ದೊಡ್ಡದು. ಬರೋಬ್ಬರಿ 74 ಪ್ರಕರಣಗಳು ಜುಬಿಲೆಂಟ್‌ಗೆ ಸಂಬಂಧಿಸಿದ್ದಾಗಿದೆ. ಆದರೂ, ಸೋಂಕು ಹೇಗೆ, ಯಾರಿಂದ ಹರಡಿತು ಎಂಬುದು ಈಗಲೂ ಚಿದಂಬರ ರಹಸ್ಯವಾಗಿಯೇ ಉಳಿದಿದೆ.
ಈ ರಹಸ್ಯವನ್ನು ಬೇಧಿಸಲು ನಿಯೋಜನೆಗೊಂಡಿದ್ದ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ಕೂಡ ವಿಫಲರಾಗಿದ್ದಾರೆ. ಪೊಲೀಸ್ ಇಲಾಖೆ ತನಿಖೆಯಿಂದಲೂ ಸೋಂಕಿನ ಮೂಲ ಪತ್ತೆ ಮಾಡಲು ಆಗಲಿಲ್ಲ. ಆದರೆ ಸೋಂಕಿನ ಕಾರಣಕ್ಕೆ ಇಡೀ ನಂಜನಗೂಡು ಸೀಲ್‌ಡೌನ್ ಮಾಡಲಾಯಿತು. ಇದರಿಂದ ಮೈಸೂರು ನಗರ, ಮಂಡ್ಯ ಜಿಲ್ಲೆಗೂ ಸೋಂಕು ಹರಡಿದ್ದು, ಸಾರ್ವಜನಿಕರು ತೀವ್ರ ತೊಂದರೆ, ಆತಂಕವನ್ನು ಈಗಲೂ ಅನುಭವಿಸುತ್ತಿದ್ದಾರೆ.
ಈ ಸಂಸ್ಥೆಯ ಪರ ದೊಡ್ಡಮಟ್ಟದ ಲಾಭಿ ನಡೆದಿರುವುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ. ‘ಈ ವಿಷಯವಾಗಿ ನನ್ನ ಮೇಲೆ ರಾಜಕೀಯ ಒತ್ತಡ, ದೆಹಲಿಯಿಂದ ಪ್ರಭಾವ ಬೀರಲಾಗುತ್ತಿದೆ’ ಎಂದು ಶಾಸಕ ಹರ್ಷವರ್ಧನ್ ಬಹಿರಂಗವಾಗಿ ಹೇಳಿದ್ದು, ಇದಕ್ಕೆ ಸಾಕ್ಷಿ.
ಅಮೆರಿಕಾ ಮೂಲದ ಕಂಪನಿಯೊಂದಿಗೆ ಜುಬಿಲೆಂಟ್ ಒಪ್ಪಂದ ಮಾಡಿಕೊಂಡಿದೆ. ಅದರ ಪ್ರಕಾರ ಈ ಕಾರ್ಖಾನೆಯಲ್ಲಿ ಕರೊನಾ ಔಷಧ ಉತ್ಪಾದನೆ ಆಗಬೇಕಿದೆ. ಇದೊಂದೆ ಕಾರಣಕ್ಕೆ ನಾನು ಯೂಟರ್ನ್ ತೆಗೆದುಕೊಳ್ಳಲೇ ಬೇಕಿದೆ. ಈ ವಿಚಾರವಾಗಿ ಖುದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸಮ್ಮುಖದಲ್ಲಿ ಮಾತುಕತೆ ಆಗಿದೆ. ಅವರ ಸೂಚನೆಯಂತೆ ನಾನು ಸುಮ್ಮನಾಗಿದ್ದೇನೆ ಎಂದು ಅವರು ಹೇಳಿದ್ದರು.
ಜತೆಗೆ, ‘ಮೇ 25ರಂದು ಜುಬಿಲೆಂಟ್ ಕಾರ್ಖಾನೆ ಪುನರಾರಂಭವಾಗಲಿದೆ. ಇದಕ್ಕಾಗಿ 3 ಷರತ್ತು ವಿಧಿಸಲಾಗಿದೆ. 50,000 ಆಹಾರ ಕಿಟ್, 10 ಗ್ರಾಮಗಳ ದತ್ತು, ಮುಂದೆ ಅನಾಹುತ ಆಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ’ ಎಂದು ತಿಳಿಸಿದ್ದರು. ಇದರ ಬೆನ್ನಹಿಂದೆಯೇ ಮಾಜಿ ಸಂಸದ ಆರ್.ಧ್ರುವನಾರಾಯಣ್, ‘ಜುಬಿಲೆಂಟ್ ಮಾಲೀಕರು ನೀಡಿದ ಭಿಕ್ಷೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಣಿದಿದ್ದು, ಇಡೀ ಪ್ರಕರಣವನ್ನೇ ಮುಚ್ಚಿಹಾಕಲಾಗಿದೆ’ ಎಂದು ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಈ ನಡುವೆ, ಸೋಂಕು ಹರಡಿದ ಕಾರ್ಖಾನೆ ವಿರುದ್ಧ ಈವರೆಗೆ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಿಲ್ಲ ಎಂಬುದು ಅಚ್ಚರಿ.
ಇಷ್ಟೆಲ್ಲ ಅವಾಂತರ ಸೃಷ್ಟಿ ಮಾಡಿದರೂ ಕಾರ್ಖಾನೆಯನ್ನು ತೆರೆಯಲು ಅವಕಾಶ ಮಾಡಿಕೊಟ್ಟಿರುವ ಸರ್ಕಾರದ ನಡೆ ಜಿಲ್ಲೆಯ ಜನರಲ್ಲಿ ಆಶ್ಚರ್ಯ ಉಂಟು ಮಾಡಿದೆ. ಆದರೆ ಈ ಕ್ರಮದಿಂದ ಸುಮಾರು ಒಂದು ಸಾವಿರ ಉದ್ಯೋಗಿಗಳು ಕೆಲಸಕ್ಕೆ ಮರಳಲು ಅವಕಾಶ ಮಾಡಿಕೊಟ್ಟಿದೆ. ಇದು ಅವರಲ್ಲಿ ಸಂತಸ ಉಂಟು ಮಾಡಿದೆ.