ಹಳ್ಳಿಗಳಲ್ಲಿ ಸರ್ಕಾರಿ ಸಲೂನ್

Govt Saloon
Published on

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ಸ್ವಾತಂತ್ರ್ಯ ದಿನದ ವಜ್ರಮಹೋತ್ಸವ ಆಚರಣೆಗೆ ದೇಶ ಸಿದ್ಧವಾಗುತ್ತಿದೆ. ಆದರೆ ಈ ಹೊತ್ತಿನಲ್ಲೂ ಪರಿಶಿಷ್ಟ ಜಾತಿ, ಪಂಗಡದವರ ಮೇಲಿನ ದೌರ್ಜನ್ಯ ನಿಂತಿಲ್ಲ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ನಿರಾಕರಣೆ, ದೇವಸ್ಥಾನ ಪ್ರವೇಶ ನೀಡದಿರುವುದು ಸೇರಿ ಕ್ಷೌರಕ್ಕೂ ಅಡ್ಡಿ ಮಾಡುವ ಪ್ರಕರಣ ವರದಿಯಾಗುತ್ತಲೇ ಇದೆ. ಇದಕ್ಕೆ ಪರ್ಯಾಯ ಮಾರ್ಗ ಆಲೋಚಿಸಿರುವ ಸಮಾಜ ಕಲ್ಯಾಣ ಇಲಾಖೆ ವಿಶೇಷ ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಿದೆ.

ಪ್ರತಿ ಗ್ರಾಮ ಪಂಚಾಯಿತಿ ಯಲ್ಲೂ ಸರ್ಕಾರದಿಂದಲೇ ಒಂದು ಕ್ಷೌರಂದಗಡಿ ತೆರೆಯುವ ಬಗ್ಗೆ ಚರ್ಚೆಗಳು ನಡೆದಿದ್ದು, ಅನುಷ್ಠಾನಕ್ಕೆ ಅಂತಿಮ ಒಪ್ಪಿಗೆ ಬಾಕಿ ಇದೆ. ಇಲಾಖೆಯ ಕಲ್ಪನೆ ಪ್ರಕಾರ ಪ್ರತಿ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಒಂದೊಂದು ಕ್ಷೌರದಂಗಡಿ ತೆಗೆಯುವ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಬೆನ್ನಿಗೆ ನಿಲ್ಲಬೇಕೆಂಬ ನಿಲುವು ಹೊಂದಲಾಗಿದೆ. ಇಲಾಖೆ ಹಿರಿಯ ಅಧಿಕಾರಿಗಳು ಈ ಕುರಿತು ವಿಜಯವಾಣಿಗೆ ವಿವರಣೆ ನೀಡಿದ್ದು, ರಾಜ್ಯದ ಕೆಲವು ಜಿಲ್ಲೆಗಳ ಗ್ರಾಮ, ಹೋಬಳಿಗಳಲ್ಲಿ ಕ್ಷೌರಿಕ ಅಂಗಡಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಾಂಗದವರಿಗೆ ಕ್ಷೌರ ಮಾಡಲು ನಿರಾಕರಿಸಲಾಗುತ್ತಿದೆ. ಇದರಿಂದ ಕೆಲವು ಕಡೆ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ. ನಿರ್ದಿಷ್ಟ ಪಡಿಸಿದ ಕ್ಷೌರದಂಗಡಿ ಇದ್ದರೆ ದೌರ್ಜನ್ಯಕ್ಕೆ ಅವಕಾಶ ಇರುವುದಿಲ್ಲ ಎಂದು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದರು.

ಹೊಸ ವ್ಯವಸ್ಥೆಯ ಒಳಿತು ಕೆಡುಕುಗಳ ಬಗ್ಗೆ ವ್ಯಾಪಕ ಚರ್ಚೆ ಆಗಬೇಕಾಗಿದೆ. ಸಾಧಕ-ಬಾಧಕ ನೋಡಿಕೊಂಡು ಕ್ಷೌರದಂಗಡಿ ಆರಂಭಿಸುವ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆಯಲಾಗಿದೆ. ಸಮಗ್ರ ಚರ್ಚೆ ನಡೆಸಿ ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ವಿವರಿಸಿದರು. ಗ್ರಾಮ ಪಂಚಾಯಿತಿ ಜವಾಬ್ದಾರಿಯಲ್ಲಿ ಕ್ಷೌರಿಕರನ್ನು ಗುರುತಿಸಿ ಅವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ಕೊಡಿಸಬಹುದೆಂಬ ಚಿಂತನೆ ಇದೆ. ಪ್ರತ್ಯೇಕ ಘಟಕ ಸ್ಥಾಪನೆ ಮಾಡುವುದು ಸೂಕ್ತವೋ ಅಥವಾ ಹಾಲಿ ಇರುವ ಕ್ಷೌರಿಕರನ್ನೇ ಈ ವ್ಯಾಪ್ತಿಯಲ್ಲಿ ಗುರುತಿಸುವುದು ಉತ್ತಮವೋ ಎಂಬುದು ಸರ್ಕಾರದ ಹಂತದಲ್ಲಿ ತೀರ್ವನವಾಗಲಿದೆ.

ಇನ್ನು ಕೆಲವು ಕಡೆಗಳಲ್ಲಿ ಪರಿಶಿಷ್ಟ ಜಾತಿ, ಪಂಗಡದ ಜನಾಂಗದವರಿಗೆ ದೇವಸ್ಥಾನಗಳಿಗೆ ಪ್ರವೇಶ ನಿರಾಕರಿಸುವ ಪ್ರಕರಣ ನಡೆಯುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಮುಜರಾಯಿ, ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಮಾಡಿ ಇಂತಹ ಘಟನೆ ಮರುಕಳಿದಂತೆ ಮುಂಜಾಗ್ರತೆ ಕೈಗೊಳ್ಳುವ ಬಗ್ಗೆಯೂ ಸರ್ಕಾರದ ಹಂತದಲ್ಲಿ ಚರ್ಚೆ ನಡೆದಿದೆ.

ಗ್ರಾಮ ಮತ್ತು ನಗರಗಳಲ್ಲಿ ಮುಖ್ಯವಾಗಿ ಪರಿಶಿಷ್ಟ ಜಾತಿ, ಪಂಗಡದವರ ಜನ ಸಂಖ್ಯೆ ಕಡಿಮೆ ಇರುವ ಪ್ರದೇಶಗಳಲ್ಲಿ ದೌರ್ಜನ್ಯ ಪ್ರಕರಣಗಳು ನಡೆಯದಂತೆ ಕ್ರಮಕೈಗೊಳ್ಳಲು ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಮೇಲಿಂದ ಮೇಲೆ ಭೇಟಿ ನೀಡಲು ಇಲಾಖೆ ಸಲಹೆ ನೀಡಿದೆ.

ಕೋರ್ಟ್​ಗೆ ಮರು ಮನವಿ

ಪರಿಶಿಷ್ಟರ ಮೇಲಿನ ಪ್ರಕರಣಗಳು ಹೆಚ್ಚಾಗಿರುವ 9 ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕೆಂದು ಸರ್ಕಾರ ಬಯಸಿತ್ತು. ಸಲ್ಲಿಸಿತ್ತು. ಆದರೆ, ಉಚ್ಛ ನ್ಯಾಯಾಲಯದಲ್ಲಿ ಈ ವಿಶೇಷ ನ್ಯಾಯಾಲಯಗಳನ್ನು ಪ್ರಾರಂಭಿಸುವ ಅವಶ್ಯಕತೆ ಇಲ್ಲ ಎಂದು ಸರ್ಕಾರ ಪ್ರಸ್ತಾವನೆಯನ್ನೇ ತಿರಸ್ಕರಿಸಿತ್ತು. ಆದರೆ ಮತ್ತೆ 9 ಜಿಲ್ಲೆಗಳಲ್ಲಿ ನ್ಯಾಯಾಲಯ ಆರಂಭಿಸುವ ಪ್ರಸ್ತಾವನೆ ಸಲ್ಲಿಸಲು ಸರ್ಕಾರ ಬಯಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net