ನಿಯಮ ಉಲ್ಲಂಘಿಸಿದವರಿಗೆ ದಂಡ ವಸೂಲಿ

012
Published on

ಬೆಳಗಾವಿ: ದೈಹಿಕ ಅಂತರ ಕಾಪಾಡಿಕೊಳ್ಳದಿರುವುದು, ಮಾಸ್ಕ್ ಹಾಕಿಕೊಳ್ಳದೆ ವ್ಯಾಪಾರ ನಡೆಸುತ್ತಿದ್ದ ಅಂಗಡಿಗಳು, ವಾಹನ ಸವಾರರ ಮೇಲೆ ಬುಧವಾರ ಪಾಲಿಕೆ ಆರೋಗ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಕಿದ್ದಾರೆ.

ಪಾಲಿಕೆಯ ಆರೋಗ್ಯ ನಿರೀಕ್ಷಕ ಶಿವಾನಂದ ಭೋಸಲೆ ನೇತೃತ್ವದ ತಂಡ ಆರೋಗ್ಯ ಸುರಕ್ಷಾ ಕ್ರಮ ಕೈಗೊಳ್ಳದಿರುವುದು ಮತ್ತು ಅಂತರ ಕಾಪಾಡಿಕೊಳ್ಳದೆ ವ್ಯಾಪಾರ ನಡೆಸುತ್ತಿದ್ದ ಫೋರ್ಟ್ ರಸ್ತೆಯಿಂದ ಪಾಟೀಲಗಲ್ಲಿ, ರೈಲ್ವೆ ಸ್ಟೇಷನ್ ರಸ್ತೆ ಮಾರ್ಗದಲ್ಲಿರುವ ಅಂಗಡಿಗಳ ಮೇಲೆ ದಾಳಿ ನಡೆಸಿದರು. ಈ ವೇಳೆ ದೈಹಿಕ ಅಂತರ ಕಾಪಾಡಿಕೊಳ್ಳದ ಅಂಗಡಿಗಳ ಮಾಲೀಕರಿಗೆ 3 ಸಾವಿರ ರೂ. ದಂಡ ವಿಧಿಸಿದ್ದಾರೆ.

100 ರೂ. ದಂಡ: ನಗರದ ಪಿಬಿ ರಸ್ತೆ ಮಾರ್ಗದಲ್ಲಿ ಮಾಸ್ಕ್ ಹಾಕಿಕೊಳ್ಳದ ಬೈಕ್ ಸವಾರರು ಮತ್ತು ಕಾರ್, ಲಾರಿ ಚಾಲಕರಿಗೆ ತಲಾ 100 ರೂ. ದಂಡ ಹಾಕಿ, ವಾಹನ ಜಪ್ತಿ ಮಾಡಿಕೊಂಡಿರುವ ಅಧಿಕಾರಿಗಳು ಒಟ್ಟು 10 ಸಾವಿರ ರೂ. ದಂಡ ಸಂಗ್ರಹಿಸಿದ್ದಾರೆ.

ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ: ಪಾಲಿಕೆ ವ್ಯಾಪ್ತಿಯ 58 ವಾರ್ಡ್ ಗಳ ಜನವಸತಿ ಪ್ರದೇಶ, ವ್ಯಾಪಾರ ನಡೆಯುವ ಪ್ರದೇಶ ಹಾಗೂ ಸರ್ಕಾರಿ ಇಲಾಖೆಗಳ ಕಚೇರಿಗಳಲ್ಲಿ ಅಂತರ ಕಾಪಾಡಿಕೊಳ್ಳುವುದು, ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳುವುದರ ಕುರಿತು ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ. ಜನರು ಎಚ್ಚೆತ್ತು ನಿಯಮ ಪಾಲನೆ ಮಾಡದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆರೋಗ್ಯ ನಿರೀಕ್ಷಕ ಶಿವಾನಂದ ಭೋಸಲೆ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net