ಬಾಕಿ ಕಾಮಗಾರಿ ಬಿಲ್​ಗಳಿಗೆ ಹಣ ಪಾವತಿ ಹಿನ್ನೆಲೆ: ಸರ್ಕಾರದಿಂದ ಬಿಬಿಎಂಪಿಗೆ 750 ಕೋಟಿ ಬಿಡುಗಡೆ

bbmp pic
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರದ "ಅಮೃತ ನಗರೋತ್ಥಾನ' ಯೋಜನೆಯಡಿ ಕೈಗೊಂಡಿರುವ ಬಾಕಿ ಕಾಮಗಾರಿ ಬಿಲ್​ಗಳಿಗೆ ಹಣ ಪಾವತಿಗಾಗಿ ಸರ್ಕಾರ, 750 ಕೋಟಿ ರೂ.ಅನುದಾನ ಬಿಡುಗಡೆಗೊಳಿಸಿದೆ. ಈ ಹಿನ್ನೆಲೆಯಲ್ಲಿ ಒಟ್ಟು ಬಾಕಿ ಉಳಿದ 3 ಸಾವಿರ ಕೋಟಿ ರೂ.ಪೈಕಿ ಈವರೆಗೆ 2,250 ಕೋಟಿ ರೂ. ಅನುದಾನ ಬಿಡುಗಡೆಯಾದಂತಾಗಿದೆ. ಮೊದಲ ಎರಡು ಕಂತಿನ ಒಟ್ಟು 1,500 ಕೋಟಿ ರೂ.ಅನುದಾನವನ್ನು ಈಗಾಗಲೇ ಸರ್ಕಾರ ಬಿಡುಗಡೆ ಮಾಡಿದೆ.

ಯೋಜನೆಯಡಿ ಬೃಹತ್​ ರಸ್ತೆಗಳು, ಮೇಲ್ಸೇತುವೆ ಮತ್ತು ಕಾರಿಡಾರ್​ ಸೇರಿ ಮುಂತಾದ ಕಾಮಗಾರಿಗಳು ಪ್ರಗತಿಯಲ್ಲಿವೆ. ಕಾಮಗಾರಿಗಳ ಸಂಬಂಧ 2,570 ಕೋಟಿ ರೂ. ಬಿಲ್​ಗಳು ಪಾವತಿಯಾಗದೆ ಬಾಕಿ ಉಳಿದಿದೆ. ಸಕಾಲದಲ್ಲಿ ಬಿಲ್​ಗಳಿಗೆ ಹಣ ಪಾವತಿಸದಿದ್ದರೆ ಕಾಮಗಾರಿಗಳ ಪ್ರಗತಿ ಕುಂಠಿತವಾಗುವ ಸಾಧ್ಯತೆ ಇದೆ. 2ನೇ ಕಂತಿನ 750 ಕೋಟಿ ರೂ. ಅನುದಾನ ಬಳಕೆ ಮಾಡಿಕೊಂಡಿರುವ ಬಗ್ಗೆ ಉಪಯುಕ್ತತಾ ಪ್ರಮಾಣ ಪತ್ರ ಸಲ್ಲಿಸಿ, ಬಾಕಿ ಬಿಲ್​ಗಳನ್ನು ಪಾವತಿಸಲು 3ನೇ ಕಂತಿನ ಅನುದಾನ ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರು ಕೋರಿದ್ದರು. ಇದಕ್ಕೆ ಸರ್ಕಾರ ಸ್ಪಂದಿಸಿದೆ. ಅದರಂತೆ, 3ನೇ ಕಂತಿನ 750 ಕೋಟಿ ರೂ. ಅನುದಾನವನ್ನು ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿಗೆ ಬಿಡುಗಡೆ ಮಾಡಿ ಸೋಮವಾರ ಅದೇಶ ಹೊರಡಿಸಿದೆ.

ಕೆಲ ಷರತ್ತು ನಿಗದಿ: ಅನುದಾನ ಬಿಡುಗಡೆ ಮಾಡಿರುವ ಆದೇಶದಲ್ಲಿ ಸರ್ಕಾರ ಕೆಲ ಷರತ್ತುಗಳನ್ನು ವಿಧಿಸಿದೆ. ವಿಶೇಷ ಮೂಲಭೂತ ಸೌಕರ್ಯಕ್ಕೆ ಬಂಡವಾಳ ಬೆಂಬಲ ಯೋಜನೆಯಡಿಯ ಕಾಮಗಾರಿಗಳಿಗೆ ಮಾತ್ರ ಅನುದಾನ ಬಳಸಿಕೊಳ್ಳಬೇಕು. ಸರ್ಕಾರದಿಂದ ಅನುಮೋದನೆ ನೀಡಿರುವ ಕ್ರಿಯಾ ಯೋಜನೆ ಕಾಮಗಾರಿಗಳಿಗೆ ಹೊರತುಪಡಿಸಿ ಬೇರೆ ಕಾಮಗಾರಿಗಳಿಗೆ, ಉದ್ದೇಶಕ್ಕೆ ಹಣ ಬಳಕೆ ಮಾಡಿದರೆ ಸಂಬಂಧಪಟ್ಟ ಮುಖ್ಯ ಲೆಕ್ಕಾಧಿಕಾರಿಯನ್ನು ಜವಾಬ್ದಾರಿಯನ್ನಾಗಿ ಮಾಡಲಾಗುವುದು. ಅನುದಾನ ಬಳಕೆ ಮಾಡಿರುವ ಬಗ್ಗೆ ಪ್ರಗತಿ ವರದಿಯೊಂದಿಗೆ ಬಳಕೆ ಪ್ರಮಾಣಪತ್ರ ಸಲ್ಲಿಸಬೇಕು. ಪ್ರತಿ ತಿಂಗಳು ನಡೆಯುವ ಎಂಪಿಕ್​ ಸಭೆಗೆ ಪ್ರಗತಿ ವರದಿ ತಯಾರಿಸಿ ಕಡ್ಡಾಯವಾಗಿ ಸಲ್ಲಿಸಬೇಕು. ನಗರಾಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕರ (ಯೋಜನೆ) ಸ್ವೀಕರ್ಥನ ರಶೀದಿ ಮೂಲಕ ರಾಜ್ಯ ಹುಜೂರ್​ ಖಜಾನೆಯಿಂದ ಡ್ರಾ ಮಾಡಿ ಪಾಲಿಕೆಯ ಮುಖ್ಯ ಆಯುಕ್ತರಿಗೆ ಇ-ಪೇಮೆಂಟ್​ ಮೂಲಕ ನೀಡಲು ಅಧಿಕಾರ ನೀಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಬಾಕಿ ಉಳಿದ ಕಾಮಗಾರಿಗಳ ಬಿಲ್​ಗಳಿಗೆ ಹಣ ಪಾವತಿಸಲು ಅನುದಾನ ಬಿಡುಗಡೆಗೆ ಸಹಕರಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​ಗೆ ಬಿಬಿಎಂಪಿ ಗುತ್ತಿಗೆದಾರರ ಸಂಘದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ.

| ಜಿ.ಎಂ.ನಂದಕುಮಾರ್​,ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net