ಸರ್ಕಾರ ಪಡಿತರ ಅಕ್ಕಿಯನ್ನು ರೈತರಿಂದ ಖರೀದಿಸಲಿ ಎಂದ ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ

231220 Kampli Farmers Day
ಕಂಪ್ಲಿಯಲ್ಲಿ ರೈತ ದಿನಾಚರಣೆ ನಿಮಿತ್ತ ಪ್ರಗತಿಶೀಲ ರೈತರಾದ ನಂ.10ಮುದ್ದಾಪುರದ ಕಟ್ಟೆ ಶಂಕರ್, ಕಮಲಾಪುರದ ಎ.ನಾಗರಾಜ್, ಪಂಪಯ್ಯಸ್ವಾಮಿ ಮಳೆಮಠ, ಮರಿಯಮ್ಮನಹಳ್ಳಿಯ ಜಗನ್ನಾಥ್ ನಾಯಕ್, ಗುಂಡಾದ ಬಣಕಾರ ನಿಂಗಪ್ಪ ಇವರನ್ನು ಸನ್ಮಾನಿಸಲಾಯಿತು.
Published on

ಕಂಪ್ಲಿ: ರೈತರು ಸಮಗ್ರ ಕೃಷಿ ಪದ್ಧತಿ ಹಾಗೂ ಮಾರುಕಟ್ಟೆ ಜ್ಞಾನವನ್ನು ಬೆಳೆಸಿಕೊಂಡಲ್ಲಿ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಾಧ್ಯ ಎಂದು ಇಲ್ಲಿನ ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಹೇಳಿದರು.

ಇಲ್ಲಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಹೊಸಪೇಟೆಯ ಕೃಷಿ ಇಲಾಖೆ ಬುಧವಾರ ಹಮ್ಮಿಕೊಂಡ ಆತ್ಮ ಯೋಜನಡಿ, ರೈತ ದಿನಾಚರಣೆ ನಿಮಿತ್ತ ಕಿಸಾನ್ ಗೋಷ್ಠಿಯ ಅಧ್ಯಕ್ಷತೆವಹಿಸಿ ಮಾತನಾಡಿದರು. ರಾಜ್ಯ ಸರ್ಕಾರ ಪಡಿತರ ಅಕ್ಕಿಯನ್ನು ರಾಜ್ಯದ ರೈತರಿಂದ ಖರೀದಿಸಬೇಕು. ಬೆಳೆಗಳ ಬೆಲೆ ಕುಸಿತಕ್ಕೆ ಸರ್ಕಾರವೇ ಹೊಣೆ. ರೈತರು ಸಾವಯವ ಗೊಬ್ಬರ ಬಳಕೆಯತ್ತ ಗಮನಹರಿಸಬೇಕು ಎಂದರು.

ಡಾ.ಎ.ಸಿ.ದಾನಪ್ಪ ಮಾತನಾಡಿ, ರೈತರ ಬೆಳೆಗೆ ಸರ್ಕಾರ ಆಯಾ ಕಾಲಕ್ಕೆ ಶಾಶ್ವತ ಬೆಲೆ ನಿಗದಿಗೊಳಿಸಿದಲ್ಲಿ ಮಾತ್ರ ರೈತ ಆರ್ಥಿಕವಾಗಿ ಸದೃಢಗೊಳ್ಳಲು ಸಾಧ್ಯ ಎಂದರು. ಗಂಗಾವತಿಯ ಕೃಷಿ ಸಂಶೋಧನಾ ಕೇಂದ್ರದ ಕೀಟ ತಜ್ಞ ಡಾ.ಸುಜಯ್ ಉರುಳಿ, ಭತ್ತಕ್ಕೆ ಮಾರಕವಾದ ಕಣೆ ರೋಗದ ಹತೋಟಿ ಕ್ರಮಗಳ ಕುರಿತು, ರೋಗಶಾಸ್ತ್ರ ತಜ್ಞ ಡಾ.ಎಸ್.ಬಿ.ಗೌಡರ್ ಭತ್ತ ಬೆಳೆಯಲ್ಲಿ ಸಸಿ ಮಡಿ ತಯಾರಿಸುವ ವಿಧಾನದಲ್ಲಿ ರೋಗ ಮತ್ತು ಕಳೆ ನಿರ್ವಹಣೆ ಕುರಿತು ಸಮಗ್ರ ಮಾಹಿತಿ ನೀಡಿದರು.

ರೈತ ದಿನಾಚರಣೆ ನಿಮಿತ್ತ ಸಮಗ್ರ ಕೃಷಿ ಪದ್ಧತಿ ಅನುಸರಿಸಿ ಪ್ರಗತಿಶೀಲ ರೈತರಾದ ನಂ.10ಮುದ್ದಾಪುರದ ಕಟ್ಟೆ ಶಂಕರ್, ಕಮಲಾಪುರದ ಎ.ನಾಗರಾಜ್, ಪಂಪಯ್ಯಸ್ವಾಮಿ ಮಳೆಮಠ, ಮರಿಯಮ್ಮನಹಳ್ಳಿಯ ಜಗನ್ನಾಥ್ ನಾಯಕ್, ಗುಂಡಾದ ಬಣಕಾರ ನಿಂಗಪ್ಪ ಹಾಗೂ ರಾಜ್ಯ ಭತ್ತ ಬೆಳೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಿತ ಡಾ.ಎ.ಸಿ.ದಾನಪ್ಪ ಇವರನ್ನು ಗೌರವಿಸಲಾಯಿತು.

ಸಹಾಯಕ ಕೃಷಿ ನಿರ್ದೇಶಕಿ ನಾಗರತ್ನಾ ಎಚ್.ಹುಲುಕೋಟಿ, ರೈತ ಸಂಘದ ಅಧ್ಯಕ್ಷ ಕೊಟ್ಟೂರು ರಮೇಶ್, ಕೃಷಿ ಅಧಿಕಾರಿಗಳಾದ ಶ್ರೀಧರ್, ಗಿರಿಜಾ, ಸಹಾಯಕ ಕೃಷಿ ಅಧಿಕಾರಿ ಲಕ್ಷ್ಮೀ, ಸಿಬ್ಬಂದಿಯಾದ ರೇಣುಕರಾಜ, ಪರಮೇಶ್ವರ ನಾಯಕ, ಗೀತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net