ಪಡಿತರದೊಂದಿಗೆ ಬೇಳೆ, ಸಕ್ಕರೆ ವಿತರಿಸಿ: ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಮನವಿ

Government Ration Distributors Association press conference Mandya
Published on

ಮಂಡ್ಯ: ಬಿಪಿಎಲ್ ಪಡಿತರ ಕಾರ್ಡುದಾರರಿಗೆ ಅಕ್ಕಿ ಜತೆಗೆ ಬೇಳೆ, ಉಪ್ಪು, ಸಕ್ಕರೆ, ಸೋಪು ಹಾಗೂ ಅಡುಗೆ ಎಣ್ಣೆಯಂತಹ ಅಗತ್ಯ ಪಡಿತರ ಸಾಮಗ್ರಿ ವಿತರಣೆ ಮಾಡಬೇಕೆಂದು ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಮನವಿ ಮಾಡಿದರು.

ರಾಜ್ಯದಲ್ಲಿ ಸರ್ಕಾರದಿಂದ 10 ಕೆ.ಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ದಿನೇ ದಿನೇ ಏರಿಕೆ ಕಾಣುತ್ತಿದ್ದು, ಇಂತಹ ದಿನನಿತ್ಯದ ಬಳಕೆ ವಸ್ತುಗಳನ್ನು ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಬೇಳೆ, ಉಪ್ಪು, ಸಕ್ಕರೆ, ಸೋಪು ಹಾಗೂ ಅಡುಗೆ ಎಣ್ಣೆ ನೀಡಲಾಗುತ್ತಿತ್ತು. ಈ ಬಾರಿ ಚುನಾವಣೆಯ ವೇಳೆಯಲ್ಲಿಯೂ ತಮ್ಮ ಪ್ರಣಾಳಿಕೆಯಲ್ಲಿ ಇದೇ ಆಹಾರ ಪದಾರ್ಥ ನೀಡುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಮತ್ತೆ ನೀಡುವ ಪಡಿತರ ನೀಡುವ ಮೂಲಕ ಜನಸಾಮಾನ್ಯರಿಗೆ ನೆರವಾಗಬೇಕು. ಈ ಪದಾರ್ಥಗಳ ಮೇಲೆ ಸರ್ಕಾರದ ಲಾಂಛನ, ಮುಖ್ಯಮಂತ್ರಿ, ಆಹಾರ ಸಚಿವರ ಫೋಟೋ ಹಾಕುವ ಮೂಲಕ ಸರ್ಕಾರಕ್ಕೂ ಹೆಚ್ಚಿನ ಪ್ರಚಾರ ದೊರೆಯಲಿದೆ ಎಂದರು.

ರಾಜ್ಯದ ಸಗಟು ಮಳಿಗೆಗೆ ಎಲೆಕ್ಟ್ರಾನಿಕ್ ಸ್ಕೇಲ್, ಸಿ.ಸಿ ಕ್ಯಾಮೆರಾ ಹಾಗೂ ಸಾಗಾಣಿಕೆ ಮಾಡುವ ಲಾರಿಗಳಿಗೆ ಜಿಪಿಎಸ್ ಅಳವಡಿಸಲು 33 ಕೋಟಿ ರೂ ಬಿಡುಗಡೆ ಮಾಡಿದೆ. ಆದರೆ ಈವರೆಗೆ ಈ ವ್ಯವಸ್ಥೆ ಕಲ್ಪಿಸಿಲ್ಲ. ತಿಂಗಳೊಳಗೆ ಎಲ್ಲವನ್ನೂ ಅಳವಡಿಸದಿದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಸಂಘದ ಪದಾಧಿಕಾರಿಗಳಾದ ಹನಕೆರೆ ರಾಜಣ್ಣ, ಮಹದೇವು, ನಂಜುಂಡೇಗೌಡ, ದೇವರಾಜು, ಮಂಟೇಸ್ವಾಮಿ, ವಜ್ರೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net