ಸೋಸಲೆಗೆ ಸರ್ಕಾರಿ ಪಿಯು ಕಾಲೇಜು ಮಂಜೂರು

14 may tnp 01
Published on

ತಿ.ನರಸೀಪುರ: ಹೋಬಳಿ ಕೇಂದ್ರವಾಗಿರುವ ಸೋಸಲೆ ಗ್ರಾಮಕ್ಕೆ ರಾಜ್ಯ ಸರ್ಕಾರದಿಂದ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಮಂಜೂರು ಮಾಡಲಾಗಿದೆ. ಗ್ರಾಮದಲ್ಲಿ ಬಾಕಿ ಉಳಿದಿರುವ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ಕೊಟ್ಟರೆ, ಯೋಜನೆ ರೂಪಿಸಿ ಅನುದಾನ ಮಂಜೂರು ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭರವಸೆ ನೀಡಿದರು.

ತಾಲೂಕಿನ ಸೋಸಲೆ ಗ್ರಾಮದಲ್ಲಿ ಬುಧವಾರ 32 ಲಕ್ಷ ರೂ. ವೆಚ್ಚದಲ್ಲಿ ಶ್ರೀ ಹೊನ್ನಾದೇವಿ ಅಮ್ಮನವರ ಚಾವಡಿ ಕಟ್ಟೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ, ಗ್ರಾಮಸ್ಥರ ಅಹವಾಲು ಆಲಿಸಿ ಮಾತನಾಡಿ, ಗ್ರಾಮದ ಕ್ರೀಡಾಪಟುಗಳ ತಯಾರಿಗೆ ಸುತ್ತಮುತ್ತಲಿನ ಆಸುಪಾಸಿನಲ್ಲೇ ಕ್ರೀಡಾಂಗಣ ನಿರ್ಮಾಣ ಮಾಡಲು 2 ಕೋಟಿ ರೂ. ಹಾಗೂ ತಾಲೂಕು ಕ್ರೀಡಾಂಗಣಕ್ಕೂ 6 ಕೋಟಿ ರೂ.ಗಳ ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಿದ್ದೇವೆ ಎಂದು ತಿಳಿಸಿದರು.

ಸಾರ್ವತ್ರಿಕ ಚುನಾವಣೆಯಲ್ಲಿ ಹಗಲಿರುಳು ಹೋರಾಟ ನಡೆಸಿ, ಗೆಲ್ಲಿಸಿದ್ದರಿಂದ ಸಚಿವನಾಗಿ ರಾಜ್ಯಾದ್ಯಂತ ಗುರುತಿಸಿಕೊಳ್ಳಲು ಸಾಧ್ಯವಾಯಿತು. ಸೋಸಲೆ ಗ್ರಾಮದಲ್ಲಿ ಬಾಕಿ ಉಳಿದಿರುವ ಮತ್ತು ಆಗಬೇಕಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಐದಲ್ಲ, ಹತ್ತು ಕೋಟಿ ರೂ. ಆಗಲಿ ಅನುದಾನ ಕಲ್ಪಿಸುವುದು ನನ್ನ ಜವಾಬ್ದಾರಿಯಾಗಿದೆ. ಗ್ರಾಮಸ್ಥರು ಹಾಗೂ ಮುಖಂಡರು ಪ್ರಸ್ತಾಪಿಸುವ ಯೋಜನೆಗಳಿಗೆ ತಾಂತ್ರಿಕ ಉಪವಿಭಾಗದ ಅಧಿಕಾರಿಗಳಿಂದ ಯೋಜನಾ ವೆಚ್ಚವನ್ನು ಸಿದ್ಧಪಡಿಸಿ ಅಭಿವೃದ್ಧಿಪಡಿಸಲಾಗುವುದು. ಸಂಸದ ಸುನೀಲ್ ಬೋಸ್ ಬರಬೇಕಿದ್ದ ಕಾರ್ಯಕ್ರಮಕ್ಕೆ ಅನಿವಾರ್ಯ ಕಾರಣಗಳಿಂದಾಗಿ ನಾನೇ ಬರಬೇಕಾಯಿತು ಎಂದು ಹೇಳಿದರು.

ಅಂಬೇಡ್ಕರ್ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ಸೋಸಲೆ ಮಹದೇವಸ್ವಾಮಿ ಮಾತನಾಡಿ, ಗ್ರಾಮ ಹೊರ ವಲಯದಲ್ಲಿರುವ ಶ್ರೀ ಹೂ ಬಾಲೇಶ್ವರಿ ದೇವಾಲಯ ನಿರ್ಮಾಣ ಹಾಗೂ ಪುರಾತನ ಶ್ರೀ ವೀರಭದ್ರೇಶ್ವರ ದೇಗುಲ ಜೀರ್ಣೋದ್ಧಾರ ಸೇರಿದಂತೆ ಗ್ರಾಮದಲ್ಲಿ ಬಾಕಿ ಉಳಿದಿರುವ ಅಭಿವೃದ್ಧಿ ಕಾಮಗಾರಿಗಳಿಗೆ 6 ಕೋಟಿ ರೂ. ಅನುದಾನವನ್ನು ವಿಶೇಷ ಕಾಳಜಿ ವಹಿಸಿ ಮಂಜೂರು ಮಾಡಬೇಕು. ಯೋಜನಾ ವೆಚ್ಚವನ್ನು ಸಿದ್ಧಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಮನವಿ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಮಹೇಶ್, ಪಿಎಸಿಸಿ ಎಸ್ ಮಾಜಿ ಅಧ್ಯಕ್ಷ ಎಂ.ಪರಶಿವಮೂರ್ತಿ, ಉಪಾಧ್ಯಕ್ಷ ಬೇಕರಿ ಸೋಮಣ್ಣ, ನಿರ್ದೇಶಕ ಎಸ್. ನಂಜುಂಡಯ್ಯ, ಜಿ.ಪಂ. ಮಾಜಿ ಸದಸ್ಯ ಹೊನ್ನನಾಯಕ, ತಾ.ಪಂ ಅಧ್ಯಕ್ಷ ಎಂ.ಮಲ್ಲಿಕಾರ್ಜುನಸ್ವಾಮಿ, ತ್ರೈಮಾಸಿಕ ಕೆಡಿಪಿ ಸದಸ್ಯರಾದ ವೀಣಾ ಶಿವಕುಮಾರ್, ಮುಯಿನ್ ಅಹಮದ್ ಖಾನ್, ಗ್ರಾ.ಪಂ.ಸದಸ್ಯ ಎಸ್.ವಿ.ಮಹೇಶ್ ಕುಮಾರ್, ಮಾಜಿ ಅಧ್ಯಕ್ಷರಾದ ಪುಟ್ಟಸ್ವಾಮಿ, ಎಂ ಮಹೇಶ, ಬಿ.ಎಸ್.ಮಹೇಶ, ಎಸ್.ರಾಜೇಶ್, ನಿವೃತ್ತ ಶಿಕ್ಷಕರಾದ ವೆಂಕಟರಮಣಸ್ವಾಮಿ, ಎಸ್.ಮಹದೇವ ಶೆಟ್ಟಿ, ಮುಖಂಡರಾದ ಎನ್.ನಿಂಗಯ್ಯ, ಕುಮಾರ್ ರಾಮೇಗೌಡ, ದೇವರಾಜು, ಬೆಳ್ಳಿ ರಾಜು, ಗದ್ದೆಮೊಳೆ ಸಿದ್ದರಾಜು ಇತರರು ಇದ್ದರು.

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲು ಜಾರಿಗೊಳಿಸಲು ದತ್ತಾಂಶಕ್ಕೆ ಗಣತಿ ಸಮೀಕ್ಷೆಯನ್ನು ಕರಾರುವಕ್ಕಾಗಿ ಮಾಡಿಸುತ್ತಿದ್ದೇವೆ. ಈ ಹಿಂದೆ ಸರಿಯಾಗಿ ಸರ್ವೇ ಮಾಡಿಸಿರಲಿಲ್ಲ. ಯಾರು ಎಷ್ಟೆಷ್ಟು ಇದ್ದಾರೆ ಅಷ್ಟಷ್ಟೇ. ಅದರಲ್ಲಿ ಹೆಚ್ಚು ಕಡಿಮೆ ಆಗಲ್ಲ. ಒಳಮೀಸಲು ವೇಳೆ ಪರಿಶಿಷ್ಟ ಜಾತಿಯ ಎಲ್ಲರೂ ಜತೆಯಾಗಿಯೇ ಇರಬೇಕು. ಜಾತಿ ಜನಗಣತಿ ವರದಿ ಸರ್ಕಾರದ ಕೈ ಸೇರಿದ ಬಳಿಕ ಮುಂದಿನ ನಿರ್ಧಾರವನ್ನು ಪ್ರಕಟಿಸುತ್ತೇವೆ.

ಡಾ.ಎಚ್.ಸಿ.ಮಹದೇವಪ್ಪ ಸಮಾಜ ಕಲ್ಯಾಣ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net