

ಕುರುಗೋಡು: ಕಡಿಮೆ ವೆಚ್ಚ ಹಾಗೂ ರಸಗೊಬ್ಬರದಿಂದ ತಾಳೆ ಬೆಳೆಯಬಹುದು. ಫಸಲಿಗೆ ಉತ್ತಮ ಬೇಡಿಕೆ ಇರುವುದರಿಂದ ರೈತರಿಗೆ ಉತ್ತಮ ಲಾಭ ಸಿಗಲಿದೆ ಎಂದು ತೋಟಗಾರಿಕೆ ಇಲಾಖೆ ಎಎಚ್‌ಒ ಕಿರಣ್ ಚೌರಾದ್ ತಿಳಿಸಿದರು.
ಇದನ್ನೂ ಓದಿ: ಕುಂದಾಪುರ ಸರ್ಕಾರಿ ಕಾಲೇಜಿನಲ್ಲಿ ಪ್ರಾತ್ಯಕ್ಷಿಕೆ
ಲಕ್ಷ್ಮೀಪುರ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಹಗರಿ ಕೃಷಿ ವಿಜ್ಞಾನ ಕೇಂದ್ರದಿಂದ ಮಂಗಳವಾರ ಆಯೋಜಿಸಿದ್ದ ತಾಳೆ ಬೆಳೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ತಾಲೂಕಿನಲ್ಲಿ ದಾಳಿಂಬೆ ಮತ್ತು ಅಂಜೂರ ಬೆಳೆ ಅಧಿಕವಾಗಿ ಬೆಳಯಲಾಗುತ್ತದೆ.
ಸದ್ಯ ಅಂಜೂರ ಬೇಡಿಕೆ ಕಳೆದುಕೊಂಡಿದ್ದು ಮೂರು ಸಾವಿರ ರೂ. ಇದ್ದ ಬಾಕ್ಸ್ ಈಗ ಕೇವಲ 300ರೂ.ಗೆ ತಲುಪಿದೆ. ಹೀಗಾಗಿ ರೈತರು ಒಂದೇ ಫಸಲಿನ ಮೇಲಿನ ಅವಲಂಬನೆ ಕಡಿಮೆ ಮಾಡಿದಾಗ ಲಾಭ ಸಾಧ್ಯ ಎಂದರು.
ಅಗತ್ಯ ನೀರಿದ್ದರೆ ತಾಳೆ ಬೆಳೆಯುವುದು ಅತ್ಯಂತ ಸುಲಭ. ಕೇಂದ್ರ ಸರ್ಕಾರ ಸಸಿ, ಗೊಬ್ಬರ ಉಚಿತವಾಗಿ ನೀಡುತ್ತಿದೆ. ಜತೆಗೆ ಹನಿ ನೀರಾವರಿಗೆ, ಅಗತ್ಯ ಪರಿಕರಿಗಳಿಗೆ ಸಹಾಯಧನ ನೀಡುತ್ತಿದೆ. ಸರ್ಕಾರಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ರೈತರು ಬೇಸಾಯ ಸುಧಾರಿಸಿಕೊಳ್ಳಬೇಕು ಎಂದರು.
ಕೃಷಿ ವಿಜ್ಞಾನಿ ಪಾಲಯ್ಯ ಮಾತನಾಡಿ, ಭತ್ತಕ್ಕೆ ಅಗತ್ಯಕ್ಕಿಂತ ಹೆಚ್ಚು ರಸಗೊಬ್ಬರ ಬಳಕೆಯಿಂದ ಖರ್ಚು ಅಧಿಕವಾಗುತ್ತಿದೆ. ಅದರಲ್ಲೂ ರೈತರು ಯೂರಿಯಾ ರಸಗೊಬ್ಬರ ಹೇರಳವಾಗಿ ಬಳಸುವುದರಿಂದ ಭೂಮಿ ಹಾಗೂ ವಾತಾವರಣ ಕಲುಷಿತವಾಗುತ್ತದೆ.
ಇದರ ಪರಿಣಾಮವೇ ಯಾವುದೇ ಗ್ರಾಮದಲ್ಲಿ ಕೊಳವೆ ಬಾವಿ ಕೊರೆಸಿದರೂ ಉಪ್ಪು ನೀರು ದೊರೆಯುತ್ತಿದೆ. ಹೀಗಾಗಿ ರೈತರು ಸಾವಯವ, ಜೈವಿಕ ಗೊಬ್ಬರ ಬಳಕೆ ಕಡೆಗೆ ಹೆಚ್ಚಿನ ಆಸಕ್ತಿ ಬೆಳಸಿಕೊಳ್ಳಬೇಕು ಎಂದರು. ವಿಜ್ಞಾನಿ ರವಿ, ಪ್ರಮುಖರಾದ ಎಚ್.ಎನ್.ಶಿವಾನಂದ, ತಾಳೆ ಬೆಳೆಗಾರರಾದ ಪಿ.ರಂಗನಾಥ್ ರೆಡ್ಡಿ, ಸಂತೋಷ ರೆಡ್ಡಿ, ಅಬ್ಬಗೇರಿ ಪ್ರವೀಣ್, ಅಬ್ಬಗೇರಿ ರಘು ಇತರರಿದ್ದರು.