ಸರ್ಕಾರದ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಿ

22 KAMPLI 04A
ಕಂಪ್ಲಿಯಲ್ಲಿ ನಡೆದ ರೈತರ ಸಂವಾದ ಕಾರ್ಯಕ್ರಮಕ್ಕೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕಿ ವಿದ್ಯಾವತಿ ಹೊಸಮನಿ ಚಾಲನೆ ನೀಡಿದರು. ಪ್ರಮುಖರಾದ ಡಾ.ಪಿ.ಪಾಲಯ್ಯ, ಕೆ.ಸೋಮಶೇಖರ, ನವ್ಯಾಪ್ರಶಾಂತ್, ಕವಿತಾ ಇತರರಿದ್ದರು.
Published on

ಕಂಪ್ಲಿ; ಎಣ್ಣೆ ಬೀಜ ಬೆಳೆದು ಖಾದ್ಯತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬೇಕು. ಖಾದ್ಯ ತೈಲ ಉತ್ಪಾದನೆಯಲ್ಲಿ ದೇಶ ಸ್ವಾವಲಂಭಿಯಾಗಲು ರೈತರು ಎಣ್ಣೆ ಬೀಜ ಬೆಳೆಯಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕಿ ವಿದ್ಯಾವತಿ ಹೊಸಮನಿ ಹೇಳಿದರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರಾಷ್ಟ್ರೀಯ ಖಾದ್ಯತೈಲ ಅಭಿಯಾನ ಹಾಗೂ ರೈತ ಆತ್ಮ ಯೋಜನೆ ಅಡಿ ಹಮ್ಮಿಕೊಂಡ ರೈತ ವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಬೀಜೋತ್ಪಾದನೆ, ಸುಸ್ಥಿರ ಬೇಸಾಯಕ್ಕಾಗಿ ರೈತರು ಸರ್ಕಾರದ ಯೋಜನೆಗಳ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಹಗರಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಪಿ.ಪಾಲಯ್ಯ ಮಾತನಾಡಿ, ಭಾರತ ದೇಶ ಖಾದ್ಯ ತೈಲ ಉತ್ಪಾದನೆಯಲ್ಲಿ ಹಿಂದುಳಿದಿದ್ದು, ಅಮದಿನ ಮೇಲೆ ಅವಲಂಬಿತವಾಗಿದೆ. ಇದರಿಂದ ದೇಶದ ಆದಾಯ ಹೊರದೇಶಗಳ ಪಾಲಾಗುತ್ತಿದೆ ಎಂದು ಹೇಳಿದರು. ಎಣ್ಣೆ ಕಾಳು ಸುಧಾರಿತ ಬೇಸಾಯ ಕ್ರಮ, ಪ್ರದೇಶ ಅಭಿವೃದ್ಧಿ ಕುರಿತು ಮಾಹಿತಿ ನೀಡಿದರು.

ಕೃಷಿ ಅಧಿಕಾರಿ ಕೆ.ಸೋಮಶೇಖರ್ ಮಾತನಾಡಿ, ತಾಲೂಕಿನಲ್ಲಿ ಎಣ್ಣೆ ಬೀಜ ಉತ್ಪಾದನೆಗೆ 150 ಹೆಕ್ಟೇರ್ ಗುರಿ ಹೊಂದಲಾಗಿದ್ದು, ಹಿಂಗಾರು, ಮುಂಗಾರು ಹಂಗಾಮು ಸೇರಿ 180 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಎಣ್ಣೆ ಬೀಜ ಬೆಳೆಯಲಾಗುತ್ತಿದೆ. ಸದ್ಯ ಸೂರ್ಯಕಾಂತಿ ಬೀಜ ರೈತರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ ಎಂದರು.

ಅಧಿಕಾರಿಗಳಾದ ನವ್ಯಾಪ್ರಶಾಂತ್, ಏಸುಬಾಬು, ಶಿವಪ್ಪ ಬಾರಿಗಿಡದ, ಶಶಿಕಾಂತ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ರೇಣುಕರಾಜ, ಪ್ರಮುಖರಾದ ಕವಿತಾ, ಶಿವಪ್ಪ ವಿ.ದೇವಕ್ಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net