

ವಿಜಯಪುರ: ಸರ್ಕಾರದ ನೀತಿ ಖಂಡಿಸಿ ವಿವಿಧ ಗುತ್ತಿಗೆ ಕಾರ್ಮಿಕರು, ದಿನಗೂಲಿ ನೌಕರರು, ರೈತ-ಕೃಷಿ ಕಾರ್ಮಿಕರು, ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು, ಹಮಾಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಗ್ರಾಮೀಣ ಅಂಚೆ ನೌಕರರು, ಗ್ರಾಮ ಪಂಚಾಯಿತಿ ನೌಕರರು, ಮನೆಗೆಲಸ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ಮುಖಂಡ ಭೀಮಶಿ ಕಲಾದಗಿ ಮಾತನಾಡಿ, ಜನ, ರೈತ ವಿರೋಧಿ ನೀತಿಗಳನ್ನು ಜಾರಿಗೆ ತರುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಗೆ ಅನ್ಯಾಯ ಎಸಗಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮೀಣ ಬ್ಯಾಂಕ್ ಯೂನಿಯನ್‌ನ ರಾಷ್ಟ್ರೀಯ ಕಾರ್ಯದರ್ಶಿ ಜಿ.ಜಿ. ಗಾಂಧಿ ಮಾತನಾಡಿ, ರೈಲ್ವೆ, ಬ್ಯಾಂಕ್‌ನಂತಹ ಸಾರ್ವಜನಿಕ ಸೇವೆಗಳನ್ನು ಖಾಸಗೀಕರಣ ಮಾಡಿ ನಿರುದ್ಯೋಗ ಸೃಷ್ಠಿಸಲಾಗುತ್ತಿದೆ. ಕರಾಳ ಮಸೂದೆಗಳು, ಸುಗ್ರೀವಾಜ್ಞೆಗಳ ಮೂಲಕ ಕಾರ್ಮಿಕರ, ರೈತರ, ಸಾಮಾನ್ಯ ಜನರ ಸಂವಿಧಾನಿಕ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ ಎಂದರು.
ರೈತ ವಿರೋಧಿ ಕಾನೂನುಗಳನ್ನು ಹಾಗೂ ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಹಿಂತೆಗೆದುಕೊಳ್ಳಬೇಕು. ಹಾಗೆಯೇ ರಾಜ್ಯ ಸರ್ಕಾರವು ಹೊರಡಿಸಿರುವ ಸುಗ್ರೀವಾಜ್ಞೆಗಳನ್ನು ವಾಪಸ್ ಪಡೆಯಬೇಕು. ಶಿಕ್ಷಣ, ಆರೋಗ್ಯ, ರೈಲ್ವೆ , ವಿದ್ಯುತ್, ದೂರ ಸಂಪರ್ಕ, ವಿಮಾ, ಬ್ಯಾಂಕ್ ಮುಂತಾದ ಸಾರ್ವಜನಿಕ ವಲಯದ ಖಾಸಗೀಕರಣ ನಿಲ್ಲಿಸಬೇಕು. ಆದಾಯ ತೆರಿಗೆ ವ್ಯಾಪ್ತಿಯ ಹೊರಗಿರುವ ಕುಟುಂಬಗಳಿಗೆ ತಿಂಗಳಿಗೆ 7500 ರೂ. ನಗದು ವರ್ಗಾವಣೆ ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ವರ್ಷಕ್ಕೆ 200 ದಿನಗಳ ಕೆಲಸವನ್ನು ಉದ್ಯೋಗ ಖಾತ್ರಿ ಯೋಜನೆಯಡಿ ನೀಡಬೇಕು. ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ 21 ಸಾವಿರ ರೂ. ಕನಿಷ್ಟ ವೇತನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಬಾಳು ಜೇವೂರ, ಲಕ್ಷ್ಮಣ ಹಂದ್ರಾಳ, ಸುನೀಲ ಸಿದ್ರಾಮಶೆಟ್ಟಿ, ಸುನಂದಾ ನಾಯಕ, ಜಯಶ್ರೀ ಕಂಬಾರ, ಸುಮಂಗಲಾ ಆನಂದಶೆಟ್ಟಿ, ಚಂದ್ರಶೇಖರ ಗಂಟೆಪ್ಪಗೋಳ, ಎಸ್.ಆರ್. ನಾಯಕ, ಭಾರತಿ ದೇವಕತೆ, ಅಂಬಿಕಾ ಒಳಸಂಗ, ಲೈಲಾ ಪಠಾಣ, ಸುರೇಖಾ ರಜಪೂತ ಮುಂತಾದವರು ಭಾಗವಹಿಸಿದ್ದರು.