

ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ ನಿಯಮ ಉಲ್ಲಂಘಿಸಿ ಕೈಗೊಂಡ ತೀರ್ಮಾನಗಳು ಇದೀಗ ಅವರಿಗೆ ಸಂಕಷ್ಟ ತಂದೊಡ್ಡಿದ್ದು, ಅವರ ವಿರುದ್ಧ ಇಲಾಖಾ ತನಿಖೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.
ನಿಯಮ ಉಲ್ಲಂಘಿಸಿ ರೋಹಿಣಿ ಸಿಂಧೂರಿ ಕೈಗೊಂಡ ತೀರ್ಮಾನಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅಂದಿನ ಕೆ.ಆರ್.ನಗರ ಶಾಸಕ ಸಾ.ರಾ. ಮಹೇಶ್ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ವಿವಿಧ ಹಂತಗಳಲ್ಲಿ ತನಿಖೆ ನಡೆಸಿ ವರದಿ ಪಡೆದುಕೊಂಡಿತ್ತು.
ಇದೀಗ ರೋಹಿಣಿ ಸಿಂಧೂರಿ ಮೇಲಿನ ಆರೋಪಗಳ ವಿರುದ್ಧ ಐಎಎಸ್ ಅಧಿಕಾರಿ ಡಾ.ಜಿ. ರವಿಶಂಕರ್ ಪ್ರಾಥಮಿಕ ತನಿಖೆ ನಡೆಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ವರದಿ ನೀಡಿದ್ದಾರೆ. ರೋಹಿಣಿ ಸಿಂಧೂರಿ ನಿಯಮ ಉಲ್ಲಂಘಿಸಿ ಜಿಲ್ಲಾಧಿಕಾರಿ ನಿವಾಸ ನವೀಕರಣ, ಈಜುಕೊಳ ನಿರ್ಮಾಣ ಹಾಗೂ ಬಟ್ಟೆ ಬ್ಯಾಗ್ ಖರೀದಿ ತೀರ್ಮಾನ ಕೈಗೊಂಡಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳು ವಂತೆ ವರದಿಯಲ್ಲಿ ಶಿಫಾರಸು ಮಾಡಿದ್ದಾರೆ. ಪ್ರಾಥಮಿಕ ತನಿಖೆಯ ಸಂದರ್ಭ ರೋಹಿಣಿ ಸಿಂಧೂರಿ ಆರೋಪಗಳಿಗೆ ಸಂಬಂಧಿಸಿದಂತೆ ಸಮಂಜಸವಾದ ಉತ್ತರ ಹಾಗೂ ಪೂರಕ ದಾಖಲೆಗಳನ್ನು ನೀಡಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಐಎಎಸ್ ಅಧಿಕಾರಿ ಡಾ.ಜಿ. ರವಿಶಂಕರ್ ಸಲ್ಲಿಸಿದ ಪ್ರಾಥಮಿಕ ತನಿಖಾ ವರದಿಯ ಆಧಾರದ ಮೇಲೆ ನಿವೃತ್ತ ಐಎಎಸ್ ಅಧಿಕಾರಿ ಯೋಗೇಂದ್ರ ತ್ರಿಪಾಠಿ, ಬಿಬಿಎಂಪಿ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ನೇತೃತ್ವದ ತನಿಖಾ ಸಮಿತಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ಥರಕನ್ ರಚಿಸಿ ಆದೇಶ ಹೊರಡಿಸಿದ್ದಾರೆ.