ಸರ್ಕಾರದ ವಿರುದ್ಧ ಸಂತ್ರಸ್ತರ ಆಕ್ರೋಶ

18-Athnai-6-A-Web
ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಕೃಷ್ಣಾ ನದಿ ರಸ್ತೆಯ ಮೇಲೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಪ್ರತಿಭಟಿಸಿದರು. ಮಹಾದೇವ ಮಡಿವಾಳ, ಜಗದೀಶ ಮರೇಗುದ್ದಿ, ಮುರುಗೆಪ್ಪ ಹೋನವಾಡ ಇತರರು ಪಾಲ್ಗೊಂಡಿದ್ದರು.
Published on

ಅಥಣಿ/ಕೊಕಟನೂರ: ಅಥಣಿ ತಾಲೂಕಿನ ಕೃಷ್ಣಾ ನದಿ ಪ್ರವಾಹ ಪೀಡಿತ ಗ್ರಾಮಗಳಿಗೆ ಪರಿಹಾರ ಹಾಗೂ ಮರು ವಸತಿ ಕಲ್ಪಿಸಲು ಮಂದಾಗದ ಸರ್ಕಾರವನ್ನು ಧರಣಿ ಮೂಲಕ ಎಚ್ಚರಿಸಲು ಜಿಲ್ಲಾಧಿಕಾರಿ ಕಚೇರಿಗೆ ತೆರಳಲು ಮುಂದಾಗಿದ್ದ ತಾಲೂಕಿನ ರೈತ ಸಂಘ ಹಾಗೂ ಹಸಿರು ಸೇನೆ ನೂರಾರು ಕಾರ್ಯಕರ್ತರನ್ನು ಗುರುವಾರ ಅಥಣಿ ಪೊಲೀಸರು ತಡೆದು ಮರಳಿ ಕಳುಹಿಸಿದ ಘಟನೆ ಹಲ್ಯಾಳ ಗ್ರಾಮದಲ್ಲಿ ಜರುಗಿತು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ಮಹಾದೇವ ಮಡಿವಾಳ ನೇತೃತ್ವದಲ್ಲಿ ರೈತರು ಬೆಳಗಾವಿ ಡಿಸಿ ಕಚೇರಿ ಬಳಿ ಧರಣಿ ನಡೆಸಲು ಹತ್ತಾರು ವಾಹನದಲ್ಲಿ ತೆರಳುತ್ತಿದ್ದ ವೇಳೆ ಹಲ್ಯಾಳ ಬಸ್ ನಿಲ್ದಾಣದ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿ ಬಳಿ ಪೊಲೀಸರು ತಡೆದರು. ಇದರಿಂದ ಅಸಮಾಧಾನಗೊಂಡ ಕಾರ್ಯಕರ್ತರು ಸ್ಥಳದಲ್ಲೇ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಮಹಾದೇವ ಮಡಿವಾಳ ಮಾತನಾಡಿ, ನೆರೆಯಿಂದ ಮನೆ ಕಳೆದುಕೊಂಡವರಿಗೆ ಸರ್ಕಾರ ವಸತಿ ಸೌಲಭ್ಯ ಕಲ್ಪಿಸಿಕೊಟ್ಟಿಲ್ಲ. ಬೆಳೆ ಹಾನಿಗೆ ಪರಿಹಾರ ಸಿಕ್ಕಿಲ್ಲ. ಸಕ್ಕರೆ ಕಾರ್ಖಾನೆಗಳು ಬಾಕಿ ಬಿಲ್ ನೀಡಿಲ್ಲ. ಮಳೆಗಾಲ ಆರಂಭವಾಗಿದ್ದು, ಮತ್ತೆ ಪ್ರವಾಹ ಬಂದರೆ ನಮ್ಮ ಗತಿ ಏನು ಎಂದು ಪ್ರಶ್ನಿಸಿದರು. ಅಥಣಿ ಪಿಎಸ್‌ಐ ಕುಮಾರ ಹಾಡಕಾರ ಇದ್ದರು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ದುಂಡಪ್ಪ ಕೋಮಾರ ಮಾತನಾಡಿ, 2-3 ತಿಂಗಳಲ್ಲಿ ಎಲ್ಲ ಇಲಾಖೆ ಅಧಿಕಾರಿಗಳ ಸಭೆ ಕರೆದು ಮಾಹಿತಿ ಪಡೆಯಲಾಗುವುದು. ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ರೈತರು ತಮ್ಮ ಗ್ರಾಮಗಳಿಗೆ ಮರಳಿದರು. ಜಗದೀಶ ಮರೇಗುದ್ದಿ, ಮುರಗೆಪ್ಪ ಹೊನವಾಡ, ಶಿವಾನಂದ ಖೋತ, ರಾಮು ಸಾತಣ್ಣವರ, ಸೋಮನಿಂಗ ತೆಲಸಂಗ, ಬಾಹುಬಲಿ ಐಗಳಿ, ಕಲ್ಲಪ್ಪ ಸಂಕನವರ, ಈರಪ್ಪ ಅಂಗಡಿ, ಬಸಪ್ಪ ತಳವಾರ, ಸುರೇಶ ನಾವಿ, ಶಶಿಧರ ಬರಲಿ, ಲಕ್ಕಪ್ಪ ಪೂಜಾರಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net