ಒಳ ಮೀಸಲಾತಿ ವರದಿಯಲ್ಲಿದೆ ಮಾದಿಗ ಜನಾಂಗದ ಭವಿಷ್ಯ

05 hnl 2
Published on

ಹೊನ್ನಾಳಿ: ಮಾದಿಗ ಜನಾಂಗ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದು ಸರ್ಕಾರ ನೀಡುವ ಒಳ ಮೀಸಲಾತಿ ವರದಿ ಆಧಾರದ ಮೇಲೆ ನಮ್ಮ ಭವಿಷ್ಯ ನಿಂತಿದೆ. ಇದನ್ನು ಮನಗಂಡು ನ್ಯಾಯ ಒದಗಿಸಬೇಕೆಂದು ಪುರಸಭಾಧ್ಯಕ್ಷ ಮೈಲಪ್ಪ ಮನವಿ ಮಾಡಿದರು.

ಪುರಸಭೆ ಆವರಣದ ಕನಕದಾಸ ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಒಳಮೀಸಲಾತಿ ಸಮೀಕ್ಷೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಈಗಾಗಲೇ ಸಮೀಕ್ಷೆ ಮಾಡಲು ರಾಜ್ಯ ಸರ್ಕಾರ ತಯಾರಿ ಮಾಡಿಕೊಂಡಿದೆ. ಸಮೀಕ್ಷೆಗೆ ಮನೆಗಳ ಹತ್ತಿರ ಬಂದಾಗ ಜಾತಿ ಕಲಂನಲ್ಲಿ ಮಾದಿಗ ಎಂದು ನಮೂದಿಸಲು ಹೇಳಿ, ಆಗ ಮೀಸಲಾತಿ ಹಂಚಿಕೆಯಲ್ಲಿ ನಮಗೆ ಸಹಕಾರಿಯಾಗಲಿದೆ ಎಂದರು.

ದಲಿತ ಮುಖಂಡ ತಮ್ಮಣ್ಣ ಮಾತನಾಡಿ, ಸುಮಾರು 30 ವರ್ಷಗಳಿಂದ ನಾವು ಒಳಮೀಸಲಿಗೆ ಹೋರಾಟ ಮಾಡುತ್ತ ಬಂದಿದ್ದೇವೆ. ಆದರೆ ಯಾವುದೇ ಸರ್ಕಾರ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಿಲ್ಲ. ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿವೆ. ಮೀಸಲಾತಿ ಸಮೀಕ್ಷೆ ಆಧರಿಸಿ ಒಳ ಮೀಸಲಾತಿ ನೀಡಬೇಕು.

ಸದಾಶಿವ ಆಯೋಗ, ಕಾಂತರಾಜ್ ಆಯೋಗ, ಮಾಧುಸ್ವಾಮಿ ಆಯೋಗಗಳು ವರದಿ ನೀಡಿದರೂ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿಂದುಳಿದ ವರ್ಗಗಳ ನಾಯಕ ಎಂದು ಕರೆಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಲಾದರೂ ಒಳಮೀಸಲು ನೀಡಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹಿರಿಯ ಮುಖಂಡರಾದ ಬೇಲಿಮಲ್ಲ್ಲೂರು ಉಮೇಶ್, ಮಾರಿಕೊಪ್ಪ ಮಂಜಪ್ಪ ಮಾತನಾಡಿದರು.

ಸಭೆಯಲ್ಲಿ ಕೆಂಗಲಹಳ್ಳಿ ಪ್ರಭಾಕರ್, ಹಾಲೇಶ ರಾಂಪುರ, ಕುಂಕುವ ಕೃಷ್ಣಪ್ಪ, ನವೀನ್ ಕುಮಾರ್, ಕೆ.ಪಿ. ಹಾಲೇಶ್ ಸೇರಿ ದಲಿತ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net