ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಚುರುಕು, ರಕ್ತದಲ್ಲಿ ಸಹಿ ಅಭಿಯಾನ; ಸರ್ಕಾರಕ್ಕೆ ಹಕ್ಕೊತ್ತಾಯ

BLOOD SIGNACHER
ವಿಜಯಪುರ ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಆಗ್ರಹಿಸಿ ಹೋರಾಟಗಾರರು ರಕ್ತದ ಮೂಲಕ ಸಹಿ ಮಾಡಿ ಸರ್ಕಾರಕ್ಕೆ ಸಂದೇಶ ರವಾನಿಸಿದರು.
Published on

ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ದಿನಕ್ಕೊಂದು ಸ್ವರೂಪ ಪಡೆಯುತ್ತಿದ್ದು, ಶುಕ್ರವಾರ ರಕ್ತದ ಮೂಲಕ ಸಹಿ ಮಾಡಿ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಲಾಯಿತು.

ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳದಲ್ಲಿ ಹೋರಾಟ ಸಮಿತಿ ಪದಾಧಿಕಾರಿಗಳು, ವೈದ್ಯರು, ಮಾಧ್ಯಮ ಪ್ರತಿನಿಧಿಗಳು, ವಿವಿಧ ಸಹಕಾರಿ ಸಂಘಗಳ ಮುಖಂಡರು, ಕನ್ನಡಪರ ಹೋರಾಟಗಾರರು, ವಿದ್ಯಾರ್ಥಿಗಳು ತಮ್ಮ ರಕ್ತದ ಮೂಲಕ ಸಹಿ ಮಾಡಿ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಿದರು.

ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗಾಗಿ ಕಳೆದ 37 ದಿನಗಳಿಂದ ಸತತ ಹೋರಾಟ ನಡೆಯುತ್ತಿದ್ದು, ಹೋರಾಟದ ಭಾಗವಾಗಿ ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಸಮಿತಿ ರಕ್ತ ಸಹಿ ಸಂಗ್ರಹಣಾ ಅಭಿಯಾನಕ್ಕೆ ಕರೆ ನೀಡಿತ್ತು. ತನ್ನಿಮಿತ್ತ ಶುಭ್ರವರ್ಣದ ಬೃಹತ್ ಬಟ್ಟೆಯ ಮೇಲೆ ಅನೇಕರು ತಮ್ಮ ರಕ್ತದಿಂದ ಸಹಿ ಮಾಡಿದರು.

ವೈದ್ಯಕೀಯ ಸಿಬ್ಬಂದಿಯ ನೆರವಿನಿಂದ ಸುರಕ್ಷಿತ ಉಪಕರಣಗಳ ಮೂಲಕ ತಮ್ಮ ರಕ್ತವನ್ನು ಪಡೆದು ಅದೇ ರಕ್ತದಲ್ಲಿ ಸಹಿ ಮಾಡಿದರು. ಇನ್ನೂ ಕೆಲವರು ‘ಸರ್ಕಾರಿ ವೈದ್ಯಕೀಯ ಕಾಲೇಜ್ ಬೇಕೆ ಬೇಕು, ಹೋರಾಟಕ್ಕೆ ನಮ್ಮ ಬೆಂಬಲ’ ಎಂದು ರಕ್ತದಲ್ಲಿಯೇ ಉದ್ಘೋಷಗಳನ್ನು ಬರೆದರು.

ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ಉದ್ದೇಶಿತ ಪಿಪಿಪಿ ಮಾದರಿ ಕೈ ಬಿಟ್ಟು ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸಲು ಆಗ್ರಹಿಸಿ ಕಳೆದ 37 ದಿನಗಳಿಂದ ಹೋರಾಟ ನಡೆಯುತ್ತಿದ್ದರೂ ಆಳುವ ವರ್ಗ ಕ್ಯಾರೆ ಎನ್ನದಿರುವುದು ಬೇಜವಾಬ್ದಾರಿ, ನಿರ್ಲಜ್ಜತನಕ್ಕೆ ಸಾಕ್ಷಿಯಾಗಿದೆ. ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಗಗನಕುಸುಮವಾಗಿದ್ದು, ಖಾಸಗಿ ಸಹಭಾಗಿತ್ವದಿಂದಾಗಿ ಮತ್ತಷ್ಟು ಸಮಸ್ಯೆ ಹೆಚ್ಚಾಗಲಿದೆ. ಬಡ ರೋಗಿಗಳು ಚಿಕಿತ್ಸೆ ಪಡೆಯಲು ಪರದಾಡಬೇಕಾಗುತ್ತದೆ. ಹೀಗಾಗಿ ಕೂಡಲೇ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪಿಸಬೇಕೆಂದು ಹೋರಾಟಗಾರರಾದ ಭಿ. ಭಗವಾನರೆಡ್ಡಿ, ಭರತ್‌ಕುಮಾರ ಎಚ್.ಟಿ, ಸಿದ್ಧಲಿಂಗ ಬಾಗೇವಾಡಿ ಸೇರಿದಂತೆ ಹಲವರು ಆಗ್ರಹಿಸಿದರು.

ಹೋರಾಟಗಾರರಾದ ಸುರೇಶ ಜಿ.ಬಿ, ಎಚ್.ಟಿ. ಮಲ್ಲಿಕಾರ್ಜುನ, ಲಕ್ಷ್ಮಣ ಹಂದ್ರಾಳ, ಅಕ್ರಂ ಮಾಶ್ಯಾಳಕರ, ಫಯಾಜ್ ಕಲಾದಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net