ರೈತರ ಮೇಲೆ ಸರ್ಕಾರದ ಗದಾ ಪ್ರಹಾರ

D9-MDG-4P1
Published on

ಮೂಡಿಗೆರೆ: ಅತಿವೃಷ್ಟಿ ಹಾಗೂ ಕಾಡುಪ್ರಾಣಿಗಳ ಹಾವಳಿಯಿಂದ ರೈತರು ಸಂಕಷ್ಟದ ಸ್ಥಿತಿಯಲಿದ್ದು, ಸರ್ಫೇಸಿ ಕಾಯ್ದೆ ಜಾರಿಯಿಂದ ಅಧಿಕಾರಿಗಳು ಜಮೀನು ಹರಾಜಿಗೆ ಮುಂದಾಗಿದ್ದಾರೆ. ಕಸ್ತೂರಿ ರಂಗನ್ ವರದಿಯಿಂದ ರೈತರಿಗೆ ಉಸಿರು ಕಟ್ಟುವ ವಾತಾವರಣವಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಜಮೀನು ಖುಲ್ಲಾಗೊಳಿಸಲು ಮುಂದಾಗಿದ್ದಾರೆ ಎಂದು ರೈತ ಸಂಘ ಹಸಿರು ಸೇನೆ ಜಿಲ್ಲಾ ಕಾರ್ಯಧ್ಯಕ್ಷ ಬಿ.ಸಿ.ದಯಾಕರ ದೂರಿದರು.
ಪರಿಸರದ ಹೆಸರಿನಲ್ಲಿ ಸರ್ಕಾರ ರೈತರ ಮೇಲೆ ಗದಾ ಪ್ರಹಾರ ನಡೆಸುತ್ತಿದೆ. ಈ ಹಿಂದೆ ಕಂದಾಯ ಇಲಾಖೆ ಜಾಗವನ್ನು ಸಾಮಾಜಿಕ ಅರಣ್ಯಕ್ಕಾಗಿ ಅರಣ್ಯ ಇಲಾಖೆಗೆ ಸರ್ಕಾರ ಹಸ್ತಾಂತರಿಸಿತ್ತು. ಆ ಜಾಗವನ್ನು ಮರಳಿ ಕಂದಾಯ ಇಲಾಖೆಗೆ ಹಸ್ತಾಂತರಿಸಿದಲ್ಲಿ ನಿವೇಶನದ ರಹಿತರಿಗೆ ಹಾಗೂ ನಿರಾಶ್ರಿತರಿಗೆ ನಿವೇಶನ ನೀಡಬಹುದಾಗಿತ್ತು. ಅರಣ್ಯ ಇಲಾಖೆ ಆ ಜಾಗವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಎತ್ತಿನಹೊಳೆ ಯೋಜನೆಯಿಂದ ಪರಿಸರ ನಾಶವಾಗುತ್ತಿದೆ. ಅದನ್ನು ಗಮನಿಸದ ಸರ್ಕಾರ ನೈಸರ್ಗಿಕ ಅರಣ್ಯ ಬೆಳೆಸುವ ರೈತರ ಮೇಲೆ ಸಮರಕ್ಕಿಳಿದಿರುವುದು ಸರಿಯಲ್ಲ. ಕಸ್ತೂರಿ ರಂಗನ್ ವರದಿಗೆ ಕೇರಳ ಸರ್ಕಾರ ತಡೆಯಾಜ್ಞೆ ತಂದಿದೆ. ರಾಜ್ಯ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಕೇಂದ್ರ ಸರ್ಕಾರದಿಂದ ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆ ಜಾರಿಗೊಂಡಿದ್ದರೂ ರಾಜ್ಯದ ಸಂಸದರು ಕೇಂದ್ರದ ವಿರುದ್ಧ ಧ್ವನಿ ಎತ್ತುತ್ತಿಲ್ಲ ಎಂದು ದೂರಿದರು.
ಚಿಕ್ಕಮಗಳೂರು ತಾಲೂಕು ಅಧ್ಯಕ್ಷ ಸಿ.ಟಿ.ತುಳಸೇಗೌಡ ಮಾತನಾಡಿ, ಸರ್ಫೇಸಿ ಕಾಯ್ದೆ ಜಾರಿ ನಂತರ ಬ್ಯಾಂಕುಗಳು ರೈತರ ಬೆನ್ನು ಬಿದ್ದಿದೆ. ತಮ್ಮ ಜಮೀನಿನಲ್ಲಿ ರೈತರು ಗಿಡ ನೆಡುವ ಮೂಲಕ ಅರಣ್ಯ ಉಳಿಸುವ ಕೆಲಸ ಮಾಡುತ್ತಿದ್ದರೂ ಸರ್ಕಾರ ಗಮನಿಸುತ್ತಿಲ್ಲ. ಸರ್ಕಾರದ ಇಂತಹ ನಡೆ ಸರಿಯಲ್ಲ. ರೈತರ ವಿರುದ್ಧ ಕೃಷಿಕರು ಬೀದಿಗಿಳಿಗಿದರೆ ಅಧಿಕಾರಿಗಳ ಆರ್ಭಟ ಕೊನೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾ ಸಂಚಾಲಕ ಡಿ.ಎಸ್.ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net