ಸರ್ಕಾರದಿಂದ ಸ್ವ ಉದ್ಯೋಗಕ್ಕೆ ಸಾಲ ಸೌಲಭ್ಯ

5 SDP 2
Published on

ಸಿದ್ದಾಪುರ: ಮಹಿಳೆಯರು ಮೈಕ್ರೋ ಫೈನಾನ್ಸ್ ಅಥವಾ ಮೀಟರ್ ಬಡ್ಡಿಯಲ್ಲಿ ಸಾಲ ಪಡೆಯಬೇಡಿ. ಬ್ಯಾಂಕುಗಳು ಶೇ.11ರ ಬಡ್ಡಿ ದರದಲ್ಲಿ ಸಾಲ ನೀಡುತ್ತಿವೆ. ಸ್ವ ಉದ್ಯೋಗಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಸಾಲ, ಸೌಲಭ್ಯ ದೊರೆಯುತ್ತಿದೆ. ಕಾಲಕಾಲಕ್ಕೆ ಸರಿಯಾಗಿ ಸಾಲದ ಕಂತು ಪಾವತಿಸಿ, ನಿರ್ಲಕ್ಷಿಸಿದರೆ ಸಿಬಿಲ್ ಹಿಸ್ಟರಿ ಆಧಾರದ ಮೇಲೆ ಬೇರೆ ಬ್ಯಾಂಕ್​ಗಳಲ್ಲಿ ಸಾಲ ದೊರೆಯುವುದಿಲ್ಲ ಎಂದು ಜಿಲ್ಲಾ ಅಗ್ರಗಣ್ಯ ಬ್ಯಾಂಕ್​ನ ಜಿಲ್ಲಾ ವ್ಯವಸ್ಥಾಪಕಿ ಭಾರತಿ ವಸಂತ್ ಹೇಳಿದರು.

ಪಟ್ಟಣದ ಶೃಂಗೇರಿ ಶಂಕರ ಮಠದ ಸಭಾಂಗಣದಲ್ಲಿ ಮನುವಿಕಾಸ ಸಂಸ್ಥೆ ಹಾಗೂ ಈಡೇಲ್ ಗೀವ್ ಫೌಂಡೇಶನ್ ಪ್ರಾಜೆಕ್ಟ್ ನಾರಿಶಕ್ತಿ ಗ್ರೀನ್ ವೇ ಬುಧವಾರ ಆಯೋಜಿಸಿದ್ದ ಮಹಿಳಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಮನುವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್ಟ ಮಾತನಾಡಿ, ಕೆಲ ಯೋಜನೆಯ ಮಾಹಿತಿಯು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ತಲುಪುತ್ತಿಲ್ಲ. ಮಾಹಿತಿ ಪಡೆಯಲು ಜನರು ಮುಂದಾಗಬೇಕಿದೆ. ಬಡತನದಿಂದ ಹೊರಬರಲು ಯೋಜನೆ ರೂಪಿಸುವ ವೇದಿಕೆ ಮನುವಿಕಾಸ ಸಂಸ್ಥೆಯಾಗಿದೆ ಎಂದು ಹೇಳಿದರು.

ರಾಣೆಬೆನ್ನೂರಿನ ವನಸಿರಿ ಸಂಸ್ಥೆಯ ಸಂಸ್ಥಾಪಕ ಎಸ್.ಡಿ. ಬಳಿಗಾರ ಮಾತನಾಡಿ, ನಶಿಸುತ್ತಿರುವ ಕೆರೆ, ಕಟ್ಟೆಗಳನ್ನು ಹೂಳೆತ್ತಿ ರೈತರ ಜಮೀನು ಫಲವತ್ತಾಗುವಂತೆ ಮನುವಿಕಾಸ ಸಂಸ್ಥೆ ಮಾಡಿದೆ. ಮಹಿಳೆಯರಿಗೆ ಸ್ವ ಉದ್ಯೋಗದ ತರಬೇತಿ ನೀಡಿ ಉದ್ಯಮಶೀಲತೆಗೆ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ. ಮಹಿಳೆಯರು ಕೇವಲ ಯೋಜನೆಗಳಿಗೆ ಮಾತ್ರ ಹೋರಾಟ ಮಾಡದೇ ಹಕ್ಕುಗಳಿಗೆ ಹೋರಾಡಬೇಕಿದೆ ಎಂದರು.

ಪಿಎಸ್​ಐ ಗೀತಾ ಕಾನಡೆ ಮಾತನಾಡಿ, ಇತ್ತಿಚೀನ ದಿನಮಾನಗಳಲ್ಲಿ ಸೈಬರ್ ಅಪರಾಧ ಹೆಚ್ಚುತ್ತಿದೆ. ಮಹಿಳೆಯರು ಹೆಚ್ಚು ಜಾಗೃತರಾಗಿರಬೇಕು ಎಂದರು.

ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ದೇಶಪಾಂಡೆ ರುಡ್ ಸೆಟ್​ನ ಮಹಾಬಲೇಶ್ವರ ನಾಯ್ಕ, ಗ್ರೀನ್ ಕೇರ್ ಸಂಸ್ಥೆಯ ಜಿತೇಂದ್ರ ಕುಮಾರ್, ಉಮೇಶ ನಾಯ್್ಕ ಸಿಡಿಪಿಒ ಪೂರ್ಣಿಮಾ ಇತರರಿದ್ದರು. ಕಾರ್ಯಕ್ರಮದಲ್ಲಿ ಹತ್ತಕ್ಕೂ ಹೆಚ್ಚಿನ ಸ್ವ ಸಹಾಯ ಸಂಘವನ್ನು ಹಾಗೂ ಸ್ವ ಉದ್ಯಮದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net