

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ 51.25 ಕೋಟಿ ರೂ. ಮೌಲ್ಯದ ಒಟ್ಟು 13 ಎಕರೆ 0.26 ಗುಂಟೆ ಸರ್ಕಾರಿ ಜಮೀನನ್ನು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದಲ್ಲಿ ತೆರವುಗೊಳಿಸಿ ಮರುವಶಕ್ಕೆ ಪಡೆಯಲಾಗಿದೆ.
ನಗರ ಜಿಲ್ಲೆಯಾದ್ಯಂತ ವಿವಿಧ ತಾಲ್ಲೂಕುಗಳ ತಹಶೀಲ್ದಾರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಗೋಮಾಳ, ಮುಫತ್ ಕಾವಲ್, ಸರ್ಕಾರಿ ಕುಂಟೆ, ಶ್ರೀಬಸವಣ್ಣ ದೇವರ ಇನಾಂ, ಗುಂಡು ತೋಪು, ಸರ್ಕಾರಿ ಖರಾಬು ಜಾಗಗಳಿಗೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು.
ಪೂರ್ವ ತಾಲ್ಲೂಕಿನ ಕೆ.ಆರ್.ಪುರ ಹೋಬಳಿಯ ಹಗದೂರು ಗ್ರಾಮದ ಸ.ನಂ. 159ರ ಗೋಮಾಳ ಒತ್ತುವರಿ ತೆರವುಗೊಳಿಸಿ ಅಂದಾಜು 10 ಕೋಟಿ ರೂ. ಮೌಲ್ಯದ 1 ಎಕರೆಯನ್ನು ವಶಕ್ಕೆ ಪಡೆಯಲಾಯಿತು. ಬಿದರಹಳ್ಳಿ ಹೋಬಳಿಯ ಕಿತ್ತಗನೂರು ಗ್ರಾಮದ ಸ.ನಂ. 165ರ ಮುಫತ್ ಕಾವಲ್ನಲ್ಲಿ 70 ಲಕ್ಷ ರೂ. ಮೌಲ್ಯದ 10 ಗುಂಟೆ ಜಾಗವನ್ನು ಮರುವಶಕ್ಕೆ ಪಡೆದುಕೊಳ್ಳಲಾಯಿತು. ಇದೇ ರೀತಿ ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ಮಾದಾಪಟ್ಟಣ ಗ್ರಾಮದ ಸ.ನಂ. 32ರ ಶ್ರೀಬಸವಣ್ಣ ದೇವರ ಇನಾಂ ಜಾಗವಾದ 0.08 ಗುಂಟೆ ವಿಸ್ತೀರ್ಣವಿದ್ದು, ಅಂದಾಜು 2.40 ಕೋಟಿ ರೂ. ಆಗಿರುತ್ತದೆ.
ಯಲಹಂಕ ತಾಲೂಕಿನ ಜಾಲ-3 ಹೋಬಳಿಯ ಬಿ.ಕೆ.ಅಮಾನಿಕರೆ ಗ್ರಾಮದಲ್ಲಿ 1 ಎಕರೆ 0.07 ಗುಂಟೆ ಸರ್ಕಾರಿ ಬೀಳು ಜಾಗವನ್ನು (5 ಕೋಟಿ ರೂ. ಮೌಲ್ಯ) ಹುತ್ತನಹಳ್ಳಿ ಗ್ರಾಮದಲ್ಲಿ 1 ಎಕರೆ (ಅಂದಾಜು 2.20 ಕೋಟಿ ರೂ.) ಹೆಸರುಘಟ್ಟ-2 ಹೋಬಳಿಯ ಕಾಮಾಕ್ಷಿಪುರ ಗ್ರಾಮದಲ್ಲಿ 0.15 ಗುಂಟೆ (ಅಂದಾಜು 1.25 ಕೋಟಿ ರೂ.) ಆಗಿರುತ್ತದೆ. ಇದಲ್ಲದೆ ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಕದರೇನಹಳ್ಳಿ ಗ್ರಾಮದಲ್ಲಿನ 3.36 ಎಕರೆ ಸರ್ಕಾರಿ ಗೋಮಾಳ (ಅಂದಾಜು 20 ಕೋಟಿ ರೂ.) ಜಾಗವನ್ನು ಒತ್ತುವರಿದಾರರಿಂದ ತೆರವುಗೊಳಿಸಿ ಜಿಲ್ಲಾಡಳಿತದ ತೆಕ್ಕೆಗೆ ತೆಗೆದುಕೊಳ್ಳಲಾಗಿದೆ ಎಂದು ನಗರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.