ನಗರ ಜಿಲ್ಲಾಡಳಿತದಿಂದ 14.62 ಕೋಟಿ ಮೌಲ್ಯದ ಸರ್ಕಾರಿ ಜಮೀನು ವಶ

sarkari jaga
Published on

ಬೆಂಗಳೂರು: ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ 14.62 ಕೋಟಿ ರೂ. ಮೌಲ್ಯದ 12 ಎಕರೆ 0.39 ಗುಂಟೆ ಸರ್ಕಾರಿ ಜಮೀನನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ನೇತೃತ್ವದಲ್ಲಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.

ನಗರದ ವಿವಿಧ ತಾಲೂಕುಗಳ ತಹಸೀಲ್ದಾರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಗೋಮಾಳ, ಗುಂಡುತೋಪು, ಸರ್ಕಾರಿ ತೋಪು, ಕರೆ, ಕಾಲುದಾರಿ ಜಾಗಗಳನ್ನು ತೆರವು ಮಾಡುವಲ್ಲಿ ಶುಕ್ರವಾರ ಸಲರಾಗಿದ್ದಾರೆ.

ಸರ್ಜಾಪುರ-1 ಹೋಬಳಿಯ ಮುಗಳೂರು ಗ್ರಾಮದ ಸ.ನಂ. 78ರ, ಸರ್ಕಾರಿ ತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.06 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ 0.18 ಲಕ್ಷ ರೂ. ಆಗಿದೆ. ಸರ್ಜಾಪುರ -2 ಹೋಬಳಿಯ ಕೊಮ್ಮಸಂದ್ರ ಗ್ರಾಮದ ಸ.ನಂ. 160ರ ಗೋಮಾಳ ಒತ್ತುವರಿ ತೆರವುಗೊಳಿಸಿ 9 ಎಕರೆ 0.31 ಗುಂಟೆ ಜಮೀನನ್ನು (6.84 ಕೋಟಿ ರೂ. ಮೌಲ್ಯ) ವಶಕ್ಕೆ ಪಡೆಯಲಾಗಿದೆ. ಜತೆಗೆ ಹುಸ್ಕೂರು ಗ್ರಾಮದ ಸ.ನಂ. 163ರ 0.18 ಗುಂಟೆ ಜಾಗ ತೆರವುಗೊಳಿಸಲಾಗಿದೆ.

ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಬೆತ್ತೆನಗೆರೆ ಗ್ರಾಮದ ಸ.ನಂ 51ಕ್ಕೆ ಸೇರಿರುವ ಗೋಮಾಳದಲ್ಲಿ 1 ಎಕರೆ (4 ಕೋಟಿ ರೂ. ಮೌಲ್ಯ), ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ ಶಿವಕೋಟಿ ಗ್ರಾಮದ ಕಾಲುದಾರಿ (ವಿಸ್ತೀರ್ಣ 0.24 ಗುಂಟೆ) ಜಾಗವನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ನಗರ ಜಿಲ್ಲಾಧಿಕಾರಿ ಕಚೇರಿಯ ಸಹಾಯಕರು ಮತ್ತು ವಿವಿಧ ತಾಲೂಕಿನ ತಹಸೀಲ್ದಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net