

ಬೇಲೂರು: ನೂರಾರು ಎಕರೆ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ ಅದನ್ನು ಉಳ್ಳವರಿಗೆ ಕೊಡುವುದನ್ನು ಬಿಟ್ಟು ರಾಜ್ಯ ಸರ್ಕಾರ ಭೂಮಿ ಇಲ್ಲದ ಬಡವರು, ನಿರ್ಗತಿಕರನ್ನು ಗುರುತಿಸಿ ಗುತ್ತಿಗೆ ನೀಡಲು ಮುಂದಾಗಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಒತ್ತಾಯಿಸಿದರು.
ಚಿಕ್ಕಮಗಳೂರಿಗೆ ತೆರಳುವ ಸಂದರ್ಭ ಪಟ್ಟಣದ ನೆಹರು ನಗರದಲ್ಲಿ ದಸಂಸ ತಾಲೂಕು ಪದಾಧಿಕಾರಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನೂರಾರು ಎಕರೆ ಜಮೀನು ಹೊಂದಿರುವವರಿಗೆ ಒತ್ತುವರಿ ಸರ್ಕಾರಿ ಭೂಮಿಯನ್ನು ಗುತ್ತಿಗೆ ಕೊಡಲು ರಾಜ್ಯ ಸರ್ಕಾರ ಮುಂದಾಗಿರುವುದು ಅಕ್ಷಮ್ಯ ಅಪರಾಧ. ಈ ಹಿಂದೆ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಇದೇ ರೀತಿ ಉಳ್ಳವರಿಗೆ ಭೂಮಿ ಕೊಡಲು ಮುಂದಾದ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಮುಖ್ಯಮಂತ್ರಿಗಳ ಮನೆ ಮುಂದೆ ಹೋರಾಟ ನಡೆಸಿತು. ಅದರಿಂದ ಅದನ್ನು ಅಂದು ಕೈಬಿಟ್ಟರು. ನಂತರದಲ್ಲಿ ಆರ್.ಅಶೋಕ್ ಮಂತ್ರಿಯಾಗಿದ್ದ ಸಂದರ್ಭದಲ್ಲೂ ಇದೇ ರೀತಿ ಒತ್ತುವರಿದಾರರಿಗೆ ಭೂಮಿ ಕೊಡಲು ಮುಂದಾಗಿದ್ದರು. ಅದು ಸಾಧ್ಯವಾಗಿರಲಿಲ್ಲ. ಆದರೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏನಾದರೂ ಸರ್ಕಾರಿ ಭೂಮಿಯನ್ನು ಗುತ್ತಿಗೆ ಕೊಡುವುದಿದ್ದರೆ, ಭೂಮಿ ಇಲ್ಲದ ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರು, ಹಿಂದುಳಿದವರು, ಅಲ್ಪಸಂಖ್ಯಾತರನ್ನು ಗುರುತಿಸಿ ಕೊಡಲಿ. ಅದನ್ನು ಬಿಟ್ಟು ಉಳ್ಳವರಿಗೆ ಭೂಮಿ ಕೊಡುವುದಾದರೆ ಸರ್ಕಾರದ ವಿರುದ್ಧ ರಾಜ್ಯ ಮಟ್ಟದಲ್ಲಿ ಬೃಹತ್ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಒಳಮೀಸಲಾತಿ ಎಂಬುದು ಸಾಮಾಜಿಕ ನ್ಯಾಯದ ಒಂದು ಭಾಗ. ಈ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಈಗ ಸರ್ಕಾರ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗ ರಚಿಸಿದೆ. ಆಯೋಗದಿಂದ ವರದಿ ಕೊಟ್ಟ ಆಧಾರದ ಮೇಲೆ ಮೀಸಲಾತಿ ಹಂಚಿಕೆ ಆಗಬೇಕು. ಹಾಗಾದಾಗ ಮಾತ್ರ ಎಲ್ಲ ತಳ ಸಮಾಜಕ್ಕೂ ನ್ಯಾಯ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಲಕ್ಷ್ಮಣ್, ಜಿಲ್ಲಾ ಸಮಿತಿ ಸದಸ್ಯ ಕೃಷ್ಣಯ್ಯ, ತಾಲೂಕು ಸಂಘಟನಾ ಸಂಚಾಲಕರಾದ ಧರ್ಮಯ್ಯ, ಭದ್ರಯ್ಯ, ಲಕ್ಷ್ಮಣ್ ಕೋನೇರ‌್ಲು, ಮಂಜುನಾಥ್, ಮುಖಂಡರಾದ ಅಶೋಕ್, ಸತೀಶ್, ಚಂದ್ರಪ್ಪ, ಸುರೇಶ್, ರವಿ, ತೀರ್ಥಕುಮಾರ್, ಪುಟ್ಟಣ್ಣ ಇತರರಿದ್ದರು.