ವಕ್ಫ್ ಖಬರಸ್ಥಾನಗಳಿಗೆ ಸರ್ಕಾರಿ ಜಮೀನು, ರಾಜ್ಯಾಧ್ಯಂತ 328 ಖಬರಸ್ಥಾನಗಳಿಗೆ ತರಾತುರಿಯಲ್ಲಿ ಸರ್ಕಾರಿ ಜಮೀನು ಮಂಜೂರಾತಿಗೆ ಕಂದಾಯ ಇಲಾಖೆಗೆ ಸೂಚನೆ, ದೇವಾಲಯಗಳಿಗೆ ನೀಡದ ಸರ್ಕಾರಿ ಜಮೀನು ಖಬರಸ್ಥಾನಗಳಿಗೆಕೆ-ವಿಎಚ್‌ಪಿ ಪ್ರಶ್ನೆ

mng_13nov Waqf
Published on

-ಶ್ರವಣ್‌ಕುಮಾರ್ ನಾಳ, ಮಂಗಳೂರು

ಕಂದಾಯ ಇಲಾಖೆಯಡಿ ಬರುವ ಕಂದಾಯ ಭೂಮಿ, ಸರ್ಕಾರಿ ಭೂಮಿಯನ್ನು ಖಬರಸ್ಥಾನವಾಗಿ ಪರಿವರ್ತಿಸುವ ಯೋಜನೆಗೆ ರಾಜ್ಯ ಸರ್ಕಾರ ಸಾಥ್ ನೀಡಿದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ವಕ್ಫ್ ಅಧೀನದ ಮಸೀದಿ, ಪ್ರಾಥನಾ ಮಂದಿರದ ಅಧೀನದಲ್ಲಿರುವ ಖಬರಸ್ಥಾನಗಳಿಗೆ ಸರ್ಕಾರಿ ಜಮೀನು ಮಂಜೂರಾತಿಗೆ ಸರ್ಕಾರ ನಿರ್ಧರಿಸಿದ್ದು, ತರಾತುರಿಯಲ್ಲಿ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆಗೆ ಸರ್ಕಾರ ಸೂಚನೆ ನೀಡಿದ ವಿಚಾರ ಬೆಳಕಿಗೆ ಬಂದಿದೆ.

ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ವಕ್ಫ್ ಆಸ್ತಿಗಳ ಕಾರ್ಯಪಡೆಯ ಪ್ರಕಾರ್ಯಗಳಲ್ಲಿ ಸಾಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಮ್ಮ ಇಲಾಖೆಯಡಿ ವಕ್ಸ್ ಆಸ್ತಿಗಳನ್ನು ನೋಂದಾಯಿಸುವುದಕ್ಕೆ ಸಂಬಂಧಿಸಿದಂತೆ ಹಲವು ಅಂಶಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ವಕ್ಫ್ ರಾಜ್ಯ ಸರ್ಕಾರವನ್ನು ಕೋರಿದ್ದು, ಇದರಲ್ಲಿ ಕಂದಾಯ ಇಲಾಖೆಯಲ್ಲಿ 21767 ವಕ್ಸ್ ಆಸ್ತಿಗಳ ಖಾತೆ ಬದಲಾವಣೆಯಾಗಬೇಕಾಗಿದ್ದು, ಈ ವಕ್ಸ್ ಆಸ್ತಿಗಳ ಮಾಹಿತಿಯನ್ನು ಭೂಮಿ ತಂತ್ರಾಂಶದಡಿಯಲ್ಲಿ ನೋಂದಾಯಿಸುವುದು, ಕಂದಾಯ ಭೂಮಿಯನ್ನು ಖಬರಸ್ಥಾನಗಳಿಗೆ ಮಂಜೂರಾತಿ ಮಾಡುವಂತೆ ಕೋರಿಕೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿ ಅವರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದರು.

*328 ಖಬರಸ್ಥಾನಗಳಿಗೆ ಕಂದಾಯ ಭೂಮಿ

ಬೆಂಗಳೂರು, ರಾಯಚೂರು, ಗುಲ್ಬರ್ಗ, ಹಾಸನ, ದ.ಕ, ಉಡುಪಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 328 ಖಬರಸ್ಥಾನಗಳಿಗೆ ಸುಮಾರು 2.75 ಸಾವಿರ ಎಕರೆ ಲಭ್ಯವಿರುವ ಕಂದಾಯ ಭೂಮಿ, ಸರ್ಕಾರಿ ಜಮೀನನ್ನು ಮಂಜೂರಾತಿ ನೀಡುವಂತೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಕಂದಾಯ ಭೂಮಿ, ಸರ್ಕಾರಿ ಜಮೀನು ಸದ್ದಿಲ್ಲದೆ ಖಬರಸ್ಥಾನವಾಗಿ ಪರಿವರ್ತನೆಗೊಳ್ಳುತ್ತಿದೆ. ಬಹುತೇಕ ಮಸೀದಿ, ಪ್ರಾಥನಾ ಮಂದಿರಗಳ ಸುತ್ತಮುತ್ತ ಜನವಸತಿ, ಸರ್ಕಾರಿ ಭೂಮಿಯಲ್ಲಿ ಕೃಷಿಕೃತ್ಯಾವಳಿ ಇದ್ದರೂ ಈ ಭೂಮಿ ಸದ್ದಿಸಿಲ್ಲದೆ ಖಾತೆ ಬದಲಾಗುವ ಸಾಧ್ಯತೆ ಇದೆ. ಒಂದು ವೇಳೆ ಭೂಮಿ ಲಭ್ಯವಿಲ್ಲದಿದ್ದರೆ ನಿಯಮಾನುಸಾರ ಖಾಸಗಿ ಜಮೀನು ಖರೀದಿಸಿ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರವೇ ಕಂದಾಯ ಇಲಾಖೆಗೆ ಸೂಚನೆ ನೀಡಿದೆ.

----------------

ದೇವಾಲಯಗಳಿಗೆ ನೀಡದ ಸರ್ಕಾರಿ ಜಮೀನು ಖಬರಸ್ಥಾನಗಳಿಗೆಕೆ

ರಾಜ್ಯದ 34223 ಸಿ ಗ್ರೇಡ್ ದೇವಾಲಯಗಳ ಸುತ್ತಲಿನ ಬಹುತೇಕ ಭೂಮಿ ಕಂದಾಯ ಭೂಮಿ, ಸರ್ಕಾರಿ ಭೂಮಿಯಾಗಿದ್ದು, ದೇವಾಲಯದ ಹೆಸರಿನಲ್ಲಿ ಮಂಜೂರಾತಿ ನೀಡುವಂತೆ 2013ರಿಂದ ಧಾರ್ಮಿಕ ಪರಿಷತ್ ಸರ್ಕಾರ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸುತ್ತಲೇ ಇದೆ. ಲಭ್ಯ ಮಾಹಿತಿ ಪ್ರಕಾರ ರಾಜ್ಯದ 5730 ಪುರಾತನ ಧಾರ್ಮಿಕ ದೇವಾಲಯಕ್ಕೆ ಪಹಣಿಯೇ ಇಲ್ಲ, ಈ ದೇವಾಲಯಗಳು ಇನ್ನೂ ಕಂದಾಯ ಇಲಾಖೆಯ ಭೂಮಿಯಲ್ಲೇ ಇದೆ. ಈ ದೇವಾಲಯಕ್ಕೆ ಸಂಭಂದಿಸಿದ ಜಾಗ 94ಸಿ, ಅಕ್ರಮ ಸಕ್ರಮದ ಮೂಲಕ, ಹಿಂದು ಹಾಗೂ ಹಿಂದುಯೇತರರಿಂದ ಅತಿಕ್ರಮಣವಾಗಿದೆ. 22335 ದೇವಾಲಯದ ಮೂಲ ಹೆಸರು ಪಹಣಿಯಲ್ಲಿ ದಾಖಲಾಗದೆ ಅಸ್ಪಷ್ಟ ರೀತಿಯಲ್ಲಿದ್ದು, ದೇವಾಲಯದ ಗರ್ಭಗುಡಿ ಹಾಗೂ ಪ್ರಾಂಗಣವನ್ನು ಮಾತ್ರ ಪಹಣಿಯಲ್ಲಿ ಸೂಚಿಸಿದೆ. ಉಳಿದ ಜಾಗ ಕಂದಾಯ, ಸರ್ಕಾರಿ ಎಂಬುದಾಗಿ ಪಹಣಿಯಲ್ಲಿ ದಾಖಲಿಸಲಾಗಿದೆ. ಆದರೆ ಈವರೆಗೆ ಕಂದಾಯ ಇಲಾಖೆಯು ದೇವಾಲಯದ ಹೆಸರಲ್ಲಿ ಭೂಮಿ ಮಂಜೂರಾತಿಗೆ ಕ್ರಮ ಕೈಗೊಂಡಿಲ್ಲ. ಆದರೆ ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಗೆ ಖಬರಸ್ಥಾನಗಳಿಗೆ ಕಂದಾಯ ಭೂಮಿಯನ್ನು ತರಾತುರಿಯಲ್ಲಿ ಮಂಜೂರಾತಿಗೊಳಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

---------------

ಸಾವಿರಾರು ದೇವಾಲಯಗಳ ಭೂಮಿ ಇನ್ನೂ ಕಂದಾಯ ಭೂಮಿ, ಸರ್ಕಾರಿ ಭೂಮಿಯಾಗಿಯೇ ಉಳಿದುಕೊಂಡಿದ್ದು, ಸರ್ಕಾರವು ದೇವಾಲಯಗಳ ಹೆಸರಿಗೆ ಈ ಭೂಮಿ ಇನ್ನೂ ಮಂಜೂರಾತಿಯಾಗಿಲ್ಲ. ಆದರೆ ಇಂದು ಏಕಾಏಕಿ ಸರ್ಕಾರಿ ಭೂಮಿಯನ್ನು ಖಬರಸ್ಥಾನಗಳ ಹೆಸರಲ್ಲಿ ಮಂಜೂರಾತಿಗೊಳಿಸಲು ಸಿದ್ದತೆ ನಡೆಸಿದ್ದು, ದೇವಾಲಯಗಳಿಗೆ ನೀಡದ ಸರ್ಕಾರಿ ಜಮೀನು ಖಬರಸ್ಥಾನಗಳಿಗೆಕೆ? ಈಬಗ್ಗೆ ರಾಜ್ಯಾಧ್ಯಂತ ಹೋರಾಟ ನಡೆಸಲಾಗುವುದು.

-ಶರಣ್ ಪಂಪ್‌ವೆಲ್, ವಿಹಿಂಪ ಪ್ರಾಂತ ಸಹಕಾರ್ಯದರ್ಶಿ

--------------

ರಾಜ್ಯ ಮಟ್ಟದ ವಕ್ಫ್ ಆಸ್ತಿಗಳ ಕಾರ್ಯಪಡೆಯ ಪ್ರಕಾರ್ಯಗಳಲ್ಲಿ ಸಾಧಿಸಿದ ಪ್ರಗತಿ ಪರಿಶೀಲನಾ ಸಭೆಯ ನಿರ್ಣಯಗಳನ್ನು ಜಾರಿಗೊಳಿಸಲು ಕಂದಾಯ ಇಲಾಖೆ ಬದ್ದವಾಗಿದೆ. ಸ್ಥಳೀಯವಾಗಿ ಲಭ್ಯವಿರುವ ಸರ್ಕಾರಿ ಭೂಮಿಯನ್ನು ಖಬರಸ್ಥಾನಗಳಿಗೆ ಮಂಜೂರಾತಿಗೊಳಿಸಲು ಯಾವುದೇ ಸಮಸ್ಯೆ ಇಲ್ಲ. ಭೂಮಿ ಲಭ್ಯವಿಲ್ಲದ ಕಡೆ ಇಲಾಖೆಯಿಂದ ಅಥವಾ ಸರ್ಕಾರದಿಂದ ಭೂಮಿ ಖರೀದಿಸಿ ಖಬರಸ್ಥಾನಗಳಿಗೆ ಕಾಯ್ದಿರಿಸುವ ಚಿಂತನೆ ಇದೆ.

- ಕೃಷ್ಣ ಬೈರೇಗೌಡ, ಕಂದಾಯ ಸಚಿವ

---------------

ರಾಜ್ಯದಲ್ಲಿ 328 ಖಬರಸ್ಥಾನಗಳಿಗೆ ಲಭ್ಯವಿರುವ ಕಂದಾಯ ಭೂಮಿ, ಸರ್ಕಾರಿ ಜಮೀನನ್ನು ಮಂಜೂರಾತಿ ಮಾಡುವಂತೆ ಸರ್ಕಾರಕ್ಕೆ ಕೋರಿಕೆ ಸಲ್ಲಿಕೆಯಾಗಿದೆ. ಈಬಗ್ಗೆ ಕ್ರಮ ಕೈಗೊಳ್ಳುವಂತೆ ಸರ್ಕಾರ ಕಂದಾಯ ಇಲಾಖೆಗೆ ಆದೇಶ ನೀಡಿದೆ. ಕಾರ್ಯ ಪ್ರಗತಿಯಲ್ಲಿದೆ.

-ಬಿ. ಝೆಡ್. ಜಮೀರ್ ಅಹ್ಮದ್ ಖಾನ್, ವಕ್ಫ್ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net