ಹುಳಿಯಾರು: ಖಾಸಗಿ ಸೋಲಾರ್ ಕಂಪನಿಗೆ ಸರ್ಕಾರಿ ಭೂಮಿಯನ್ನು ಗುತ್ತಿಗೆ ನೀಡಲಾಗಿದ್ದು, ಸದರಿ ಭೂಮಿಯನ್ನು ಉಳುಮೆ ಮಾಡುತ್ತಿದ್ದ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂಬ ಆರೋಪ ಹುಳಿಯಾರು ಸಮೀಪದ ಕಂದಿಗೆರೆ ಹೋಬಳಿಯ ಚಿಕ್ಕರಾಂಪುರದಲ್ಲಿ ಕೇಳಿಬರುತ್ತಿದೆ.
ಚಿಕ್ಕರಾಮಪುರದ ಸರ್ವೇ ನಂ.14ರ 148 ಎಕರೆ ಸರ್ಕಾರಿ ಭೂಮಿಯನ್ನು ಗ್ರಾಮದ ಪರಿಶಿಷ್ಟ ಜಾತಿಯ ಒಟ್ಟು 62 ಕುಟುಂಬಗಳು ತಲಾ ಎರಡೆರಡು ಎಕರೆಯಂತೆ 1980ರಿಂದಲೂ ಬಗರ್ ಹುಕುಂ ಸಾಗುವಳಿ ಮಾಡುತ್ತಿವೆ.
1990, 1998 ಹಾಗೂ 2018ರಲ್ಲಿ ಕೆಲ ಭೂರಹಿತ ದಲಿತ ರೈತರು ಜಮೀನು ಸಕ್ರಮಕ್ಕಾಗಿ ಫಾಮ್ರ್ 50, 53 ಮತ್ತು 57 ಅರ್ಜಿ ಸಹ ಸಲ್ಲಿಸಿದ್ದರು. ಆಗ ಕಬ್ಜಾ ಆಧಾರದ ಮೇಲೆ ಕೆಲವರಿಗೆ ಟಿಟಿ ಕಟ್ಟಿಸಿಕೊಡಲಾಗಿದ್ದು, ಕೆಲವರಿಗೆ ಸರ್ವೇ ಮಾಡಿ ಸ್ಕೆಚ್ ಸಹ ನೀಡಲಾಗಿದೆ. ಇನ್ನೂ ಕೆಲವರಿಗೆ ಸಾಗುವಳಿ ಚೀಟಿ ವಿತರಿಸಲಾಗಿದ್ದು, ಕೆಲ ಖಾತೆಗಳೂ ಆಗಿವೆ. ಆದರೆ ಕಳೆದ ಎರಡ್ಮೂರು ತಿಂಗಳ ಹಿಂದಷ್ಟೆ ಖಾಸಗಿ ಕಂಪನಿಯು ರೈತರ ಸ್ವಾಧಿನದಲ್ಲಿರುವ 40 ಎಕರೆಗೂ ಹೆಚ್ಚು ಭೂಮಿಯನ್ನು ಸಮತಟ್ಟು ಮಾಡಿ, ಸೋಲಾರ್ ಪ್ಯಾನಲ್ ಅಳವಡಿಸಲು ಮುಂದಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಹೋರಾಟದ ಎಚ್ಚರಿಕೆ: ಸರ್ಕಾರಿ ಜಮೀನನ್ನು ಲೀಸ್ ನೀಡಿರುವ ಸಂಬಂಧ ಆಕ್ರೋಶಗೊಂಡ ರೈತರು ಬುಧವಾರ ಸ್ಥಳಕ್ಕೆ ಧಾವಿಸಿ ಪ್ರತಿಭಟನೆಗೆ ಮುಂದಾಗಿದ್ದು, ಈ ವೇಳೆ ಕಂಪನಿ ಸಿಬ್ಬಂದಿ ರೈತರಿಗೆ ಬೆದರಿಕೆ ಹಾಕಿ, ದಬ್ಬಾಳಿಕೆಗೆ ಮುಂದಾಗಿದ್ದರು ಎನ್ನಲಾಗುತ್ತಿದೆ. ಹೋಬಳಿ ವ್ಯಾಪ್ತಿಯಲ್ಲಿ ನೂರಾರು ಎಕರೆ ಖಾಲಿ ಭೂಮಿ ಇದ್ದರೂ ದಲಿತ ರೈತರನ್ನು ಒಕ್ಕಲೆಬ್ಬಿಸುವ ದುರುದ್ದೇಶದಿಂದ ಅಧಿಕಾರಿಗಳು ಈ ಭೂಮಿಯನ್ನೇ ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಿದ್ದಾರೆ. ಪ್ರಾಣ ಹೋದರೂ ಭೂಮಿ ಬಿಡುವುದಿಲ್ಲ ಎಂದು ರೈತರು ಎಚ್ಚರಿಕೆ ನೀಡಿದರು. ಈ ಸಂಬಂಧ ರಾಜ್ಯ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ತಿಪಟೂರು ಕೃಷ್ಣ, ರಾಘವೇಂದ್ರ ಯಗಚಿಕಟ್ಟೆ, ಶಿವಕುಮಾರ್ ಮತ್ತಿಘಟ್ಟ ಮತ್ತಿತರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ಗುಡ್ಡಕ್ಕೆ ಫ್ಯಾನ್ ಹಾಕುತ್ತಾರೆ ಅನ್ಕೊಂಡಿದ್ದೋ...!
ಖಾಸಗಿ ಕಂಪನಿಯವರು ಮೊದಲು ಗುಡ್ಡದ ಕೆಳಗೆ ಸಮತಟ್ಟು ಮಾಡುತ್ತಿದ್ದರು. ನಾವು ಪವನಯಂತ್ರ ಅಳವಡಿಸಲು ರಸ್ತೆ ಮಾಡುತ್ತಿದ್ದಾರೆ ಎಂದುಕೊಂಡಿದ್ದೆವು. ಹೀಗೆ 40 ಎಕರೆ ಸಮತಟ್ಟು ಮಾಡಿದಾಗ ಅನುಮಾನಗೊಂಡು ವಿಚಾರಿಸಿದಾಗ ಸೋಲಾರ್ ಅಳವಡಿಸುವ ಮಾಹಿತಿ ಲಭಿಸಿತು. ಆಗ ಎಲ್ಲರೂ ಒಗ್ಗಟ್ಟಾಗಿ ಸ್ಥಳಕ್ಕೆ ಬಂದು, ನಮ್ಮನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದೇವೆ. ಈಗ ಕಾಮಗಾರಿ ನಿಲ್ಲಿಸಿದ್ದಾರೆ. ಮತ್ತೆ ಆರಂಭಿಸಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಚಿಕ್ಕರಾಮಪುರ ರೈತ ವೆಂಕಟೇಶ್ ಎಚ್ಚರಿಸಿದರು.
ಚಿಕ್ಕರಾಮಪುರದಲ್ಲಿ ಸೋಲಾರ್ ಪ್ಲಾ$್ಯಂಟ್ ಅಳವಡಿಸುತ್ತಿರುವ ಸ್ಥಳ ಪರಿಶೀಲಿಸಿದ್ದೇನೆ. ಅಲ್ಲಿ ವಾಸ್ತವವಾಗಿ ಸಾಗುವಳಿ ಮಾಡಿರುವ ಯಾವುದೇ ಕುರುಹುಗಳಿಲ್ಲ. ಅಲ್ಲದೆ ಕಡಿದಾದ ಕಾಡುಗಲ್ಲು ಹಾಗೂ ಕುರುಚಲು ಗಿಡಗಳಿರುವ ಪ್ರದೇಶ. ಆಜೂಬಾಜಿನಲ್ಲೂ ಸಾಗುವಳಿ ಮಾಡಿಲ್ಲ. ಮುಖ್ಯವಾಗಿ ಈ ಭೂಮಿ ಕೃಷಿಗೆ ಯೋಗ್ಯವೇ ಅಲ್ಲ. ಈ ವರದಿಯನ್ನೇ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ.| ಕೆ.ಪುರಂದರ್ ತಹಸೀಲ್ದಾರ್, ಚಿಕ್ಕನಾಯಕನಹಳ್ಳಿಸಾಗುವಳಿ ಮಾಡುತ್ತಿದ್ದ ಸ್ಥಳವನ್ನೇ ಜೆಸಿಬಿ ಮೂಲಕ ಸಮತಟ್ಟು ಮಾಡಿದ್ದಾರೆ. ಪಕ್ಕದಲ್ಲೇ ತೆಂಗು ಬೆಳೆ ಇದೆ. ದಿಣ್ಣ್ಣೆಯಲ್ಲಿ ರೈತರು ಈಗಲೂ ಜೋಳ ಬೆಳೆಯುತ್ತಿದ್ದಾರೆ. ಕೆಲವರಿಗೆ ಸಾಗುವಳಿ ಚೀಟಿ ಕೊಟ್ಟಿದ್ದಾರೆ. ಸಾಗುವಳಿ ಮಾಡುತ್ತಿರುವವರೆಲ್ಲರೂ ದಲಿತರೆನ್ನುವ ಕಾರಣಕ್ಕೆ ಆ ಭೂಮಿಗೆ ಜಿಲ್ಲಾಡಳಿತ ಕೈ ಹಾಕಿದೆ. ರಾಜ್ಯ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ದಾಖಲೆ ಸಹಿತ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು.| ತಿಪಟೂರು ಕೃಷ್ಣ ರಾಜ್ಯ ಸದಸ್ಯ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ