ಖಾಸಗಿ ವ್ಯಕ್ತಿಗೆ ಸರ್ಕಾರಿ ಜಾಗ ಖಾತೆ

ಬೇಲೂರು ಪಟ್ಟಣದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಆಗಮಿಸಿ ಚರ್ಚಿಸಿದರು.
ಬೇಲೂರು ಪಟ್ಟಣದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಆಗಮಿಸಿ ಚರ್ಚಿಸಿದರು.
Published on

ಬೇಲೂರು: ಪುರಸಭೆ ಅಧಿಕಾರಿ ಮತ್ತು ಸಿಬ್ಬಂದಿ ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗೆ ಸರ್ಕಾರಿ ಜಾಗವನ್ನು ಖಾತೆ ಮಾಡಿಕೊಟ್ಟಿದ್ದಾರೆಂದು ಆರೋಪಿಸಿ ಗುರುವಾರ ಪಟ್ಟಣದಲ್ಲಿ ನೂರಾರು ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಪಟ್ಟಣದ ನೆಹರು ನಗರದಲ್ಲಿರುವ ಕೂಡ್ಲೂರು ನಾಲೆ ಪಕ್ಕದಲ್ಲಿರುವ ಸರ್ಕಾರಿ ಜಾಗದಲ್ಲಿ ನೆಹರು ನಗರ ಗಣಪತಿ ಸೇವಾ ಸಮಿತಿಯವರು ಹಲವು ವರ್ಷಗಳಿಂದ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರಗಳೊಂದಿಗೆ ವಿವಿಧ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಆದರೆ ಕೊಟ್ಯಂತರ ರೂ. ಬೆಲೆ ಬಾಳುವ ಈ ಜಾಗವನ್ನು ಖಾಸಗಿ ವ್ಯಕ್ತಿಗಳೊಂದಿಗೆ ಶಾಮಿಲಾಗಿ ಪುರಸಭೆ ಅಧಿಕಾರಿಗಳು ಅಕ್ರಮವಾಗಿ ಖಾತೆ ಮಾಡಿದ್ದಾರೆ. ಹಾಗಾಗಿ ಇದನ್ನು ಖಾತೆ ರದ್ದು ಮಾಡಬೇಕೆಂದು ಒತ್ತಾಯಿಸಿದರು.

ಗಣಪತಿ ಸೇವಾ ಸಮಿತಿ ಅಧ್ಯಕ್ಷ ಹಾಗೂ ಪುರಸಭೆ ಮಾಜಿ ಉಪಾಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಪಟ್ಟಣದ ನೆಹರು ನಗರದ ಸರ್ವೇ ನಂ.5259/57/16 ರಲ್ಲಿ 2001-2002 ರಲ್ಲಿ ಯಾವುದೇ ಮೂಲ ದಾಖಲೆ ಇಲ್ಲ. ಆದರೂ ಪುರಸಭೆ ಅಧಿಕಾರಿಗಳು ಖಾಸಗಿ ವ್ಯಕ್ತಿಯೊಂದಿಗೆ ಶಾಮಿಲಾಗಿ ಪೌತಿ ಖಾತೆ ಮಾಡಿ ಕೊಡುವ ಮೂಲಕ ಸರ್ಕಾರಕ್ಕೆ ಕೊಟ್ಯಂತರ ರೂ. ನಷ್ಟ ಉಂಟು ಮಾಡಿದ್ದಾರೆ. ಜತೆಗೆ ನಕಲಿ ಖಾತೆ ಸೃಷ್ಟಿಸಿ ಸರ್ಕಾರಕ್ಕೆ ವಂಚನೆ ಮಾಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಕಂದಾಯ ಸಚಿವರು, ಕಂದಾಯ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಲೋಕಯುಕ್ತಕ್ಕೆ ದೂರು ನೀಡಲಾಗುವುದು ಎಂದರು.

ಇಪ್ಪತ್ತು ವರ್ಷಗಳಿಂದ ಇದೇ ಸ್ಥಳದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತಿದೆ. ಇದೇ ಜಾಗದಲ್ಲಿ ಸಮುದಾಯ ಭವನ ನಿರ್ಮಿಸುವಂತೆ ಸರ್ಕಾರಕ್ಕೆ ಸಮಿತಿಯಿಂದ ಮನವಿ ಮಾಡಿದ್ದರೂ ಪುರಸಭೆಯವರು ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿ ಕೊಟ್ಟಿರುವುದು ಭ್ರಷ್ಟತನಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ ಖಾತೆ ಮಾಡಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ಈ ಜಾಗವನ್ನು ಮತ್ತೆ ಗಣಪತಿ ಸೇವಾ ಸಮಿತಿಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಪುರಸಭೆ ಅಧಿಕಾರಿಗಳು ಅಕ್ರಮವಾಗಿ ಖಾತೆ ಮಾಡಿರುವುದನ್ನು ರದ್ದುಪಡಿಸಲು ಸೂಕ್ತ ಕ್ರಮ ಕೈಗೊಳ್ಣಲಾಗುವುದು. ಮುಖ್ಯಾಧಿಕಾರಿ ವಿರುದ್ಧ ತನಿಖೆ ನಡಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿ ಅಮಾನತಿಗೆ ಒತ್ತಾಯಿಸಲಾಗುವುದು. ಹತ್ತಾರು ವರ್ಷಗಳಿಂದ ಈ ಜಾಗದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಿಕೊಂಡು ಬರುತ್ತಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಈ ಜಾಗವನ್ನು ಗಣಪತಿ ಟ್ರಸ್ಟ್‌ಗೆ ಉಳಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರತಿಭಟನೆ ಸಂದರ್ಭ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಮಮತಾ, ಪ್ರತಿಭಟನಾಕಾರರ ಮನವಿ ಆಲಿಸಿ ಈ ಜಾಗವು ಕಂದಾಯ ಇಲಾಖೆಗೆ ಸೇರಿದ್ದು, ನಾವೇ ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಿದ್ದೇವೆ ಎಂದರು.

ಪುರಸಭೆ ಸದಸ್ಯರಾದ ಬಿ.ಎಲ್.ಪ್ರಭಾಕರ್, ಬಿ.ಸಿ.ಜಗದೀಶ್, ಮಾಜಿ ಸದಸ್ಯ ಮಂಜುನಾಥ್, ಬಿಜೆಪಿ ಮುಖಂಡರಾದ ಬೆಣ್ಣೂರು ರೇಣುಕುಮಾರ್, ಪರ್ವತಯ್ಯ, ನಾಗರೀಕರಾದ ಸಂತೋಷ್, ನಾಗರಾಜೇಗೌಡ, ಪುಟ್ಟರಾಜು, ಬಿ.ಆರ್.ಮಂಜುನಾಥ್, ಡಿ.ಕೆ.ವೆಂಕಟೇಶ್ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net