

ವಿಜಯವಾಣಿ ವಿಶೇಷ ಮೈಸೂರು
ಶತಮಾನದ ಇತಿಹಾಸ ಹೊಂದಿರುವ ನಗರದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‌ಡೌನ್ ಕಟ್ಟಡಗಳನ್ನು ಕೆಡವಲು ಸರ್ಕಾರ ಉತ್ಸಹ ತೋರುತ್ತಿದ್ದು, ಸರ್ಕಾರದ ನಿಲುವಿಗೆ ಪಾರಂಪರಿಕ ತಜ್ಞರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‌ಡೌನ್ ಕಟ್ಟಡ ನಾಡಿನ ಪರಂಪರೆಯ ಹೆಗ್ಗುರುತ್ತುಗಳಾಗಿವೆ. ಅದನ್ನು ಅಳಿಸಿ ಹಾಕಲು ಸರ್ಕಾರ ಯತ್ನಿಸುತ್ತಿರುವುದು ಸರಿಯಲ್ಲ. ಸರ್ಕಾರ ಇನ್ನಾದರೂ ಕಟ್ಟಡಗಳ ಸಂರಕ್ಷಣೆಗೆ ಮನಸ್ಸು ಮಾಡಬೇಕು ಎಂಬುದು ಪಾರಂಪರಿಕ ತಜ್ಞರ ಅಭಿಪ್ರಾಯವಾಗಿದೆ.
ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‌ಡೌನ್ ಕಟ್ಟಡಗಳನ್ನು ಸಂರಕ್ಷಣೆ ಮಾಡಬೇಕೇ ಅಥವಾ ಪುನರ್ ನಿರ್ಮಾಣ ಮಾಡಬೇಕೇ ಎಂಬ ವಿಚಾರ ಇದೀಗ ಸುಪ್ರೀಂಕೋರ್ಟ್ ಅಂಗಳದಲ್ಲಿ ಇದೆ. ಆದರೆ, ನ್ಯಾಯಾಲಯದ ತೀರ್ಪು ಹೊರ ಬರುವ ಮುನ್ನವೇ ಸರ್ಕಾರ ಕಟ್ಟಡಗಳನ್ನು ಕೆಡವಲು ಉತ್ಸಾಹ ತೋರುತ್ತಿರುವುದು ಪಾರಂಪರಿಕ ತಜ್ಞರ ಅಸಮಾಧಾನಕ್ಕೆ ಕಾರಣವಾಗಿದೆ. ನ್ಯಾಯಾಲಯದಲ್ಲಿ ತೀರ್ಪು ಪ್ರಕಟವಾದ ನಂತರ ಸರ್ಕಾರ ಒಂದು ತೀರ್ಮಾನಕ್ಕೆ ಬರಲಿ. ಆದರೆ, ಪ್ರಕರಣ ನ್ಯಾಯಾಲಯದಲ್ಲಿರುವ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಕಟ್ಟಡವನ್ನು ಕೆಡವಿ ಹೊಸದಾಗಿ ಕಟ್ಟಲಾಗುವುದು ಎಂದು ನೀಡಿರುವ ಹೇಳಿಕೆ ನ್ಯಾಯಾಂಗ ನಿಂದನೆ ಆಗುವುದಿಲ್ಲ ಎಂದು ಪಾರಂಪರಿಕ ತಜ್ಞ ಪ್ರೊ.ಎನ್.ಎಸ್. ರಂಗರಾಜು ಪ್ರಶ್ನಿಸಿದ್ದಾರೆ.
ಸುಪ್ರೀಂ ಅಂಗಳದಲ್ಲಿ ಪ್ರಕರಣ: ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‌ಡೌನ್ ಕಟ್ಟಡಗಳು ಸಂಪೂರ್ಣ ದುಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ಹೊಸದಾಗಿ ಪಾರಂಪರಿಕ ಶೈಲಿಯಲ್ಲಿ ಪುನರ್ ನಿರ್ಮಾಣ ಮಾಡಲು ಸರ್ಕಾರ ಆಸಕ್ತಿ ತೋರಿದೆ. ಸರ್ಕಾರದ ಈ ನಿರ್ಧಾರ ವಿರುದ್ಧ ನಗರದ ಗೌರಿಸತ್ಯ ಹೈಕೋಟ್ ನರ್ಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು. ನಂತರ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದರು.
ಪಾರಂಪರಿಕ ತಜ್ಞರ ಅಭಿಪ್ರಾಯ ಪಡೆಯದೆ ಅಧಿಕಾರಿಗಳು ಹಾಗೂ ಸಿವಿಲ್ ಇಂಜಿನಿಯರ್‌ಗಳ ಅಭಿಪ್ರಾಯವನ್ನು ಮಾತ್ರ ಪಡೆದು ಪಾರಂಪರಿಕ ಕಟ್ಟಡವನ್ನು ನೆಲಸಮ ಮಾಡಲು ಸರ್ಕಾರ ನಿರ್ಧರಿಸಿರುವ ಕ್ರಮ ಸರಿ ಇಲ್ಲ. ಹೀಗಾಗಿ ತಜ್ಞರ ಅಭಿಪ್ರಾಯ ಪಡೆಯಬೇಕು ಎಂದು ಗೌರಿಸತ್ಯ ಅವರು ಸುಪ್ರೀಂಕೋರ್ಟ್‌ನಲ್ಲಿ ಗಮನ ಸೆಳೆದರು. ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯರಾಗಿರುವ ಪ್ರೊ.ಎನ್.ಎಸ್. ರಂಗರಾಜು ಹಾಗೂ ಇತರರು ಕಟ್ಟಡವನ್ನು ನೆಲಸಮಗೊಳಿಸುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಈ ಅಂಶವನ್ನು ಸರ್ಕಾರ ನ್ಯಾಯಾಲಯದ ಗಮನಕ್ಕೆ ತಂದಿರಲಿಲ್ಲ. ತಜ್ಞರ ಅಭಿಪ್ರಾಯವನ್ನು ಪರಿಗಣಿಸದೆ ಕಟ್ಟಡ ಕೆಡವಲು ಸರ್ಕಾರ ಕೈಗೊಂಡಿರುವ ನಿರ್ಧಾರ ಸರಿ ಇಲ್ಲ. ಹೀಗಾಗಿ ತಜ್ಞರ ಅಭಿಪ್ರಾಯ ಪಡೆಯಬೇಕು ಎಂದು ಗೌರಿಸತ್ಯ ನ್ಯಾಯಾಲಯದ ಗಮನ ಸೆಳೆದಿದ್ದರು. ಈ ಅಂಶವನ್ನು ಗಮನಿಸಿದ ನ್ಯಾಯಾಲಯವು ಆರ್ಕಿಯಾಲಜಿ ಸರ್ವೇ ಆಫ್ ಇಂಡಿಯಾ (ಎಎಸ್‌ಐ) ಮತ್ತು ನ್ಯಾಷನಲ್ ಟ್ರಸ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ (ಇಂಟ್ಯಾಕ್)ನ ಅಭಿಪ್ರಾಯ ಪಡೆಯಲು ಈ ಸಂಸ್ಥೆಗಳನ್ನು ಪಾರ್ಟಿ ಮಾಡುವಂತೆ ಡಿ.4 ರಂದು ಆದೇಶ ನೀಡಿತ್ತು. ಹೀಗಾಗಿ ಈ ಎರಡು ಸಂಸ್ಥೆಗಳು ಇದೀಗ ನ್ಯಾಯಾಲಯದ ಅಫಿಡವಿಟ್ ಸಲ್ಲಿಸಿದ್ದು, ಸುಪ್ರೀಂಕೋರ್ಟ್ ನಿರ್ದೇಶನ ಪ್ರಕಾರ ಈ ಸಂಸ್ಥೆಗಳು ನಗರದ ಪಾರಂಪರಿಕ ಕಟ್ಟಡಗಳ ವಸ್ತುಸ್ಥಿತಿಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ನಿರೀಕ್ಷೆ ಇದೆ. ಹೀಗಾಗಿ ಈ ಎರಡು ಕಟ್ಟಡಗಳ ವಿಚಾರ ಕುತೂಹಲ ಕೆರಳಿಸಿದೆ.
ದಶಕದಿಂದ ಸಂರಕ್ಷಣೆ ಕಾಣದ ಕಟ್ಟಡ
ಶತಮಾನದ ಇತಿಹಾಸ ಹೊಂದಿರುವ ಪಾರಂಪರಿಕ ‘ಲ್ಯಾನ್ಸ್‌ಡೌನ್’ ಕಟ್ಟಡ 2012 ಆಗಸ್ಟ್ 23,24 ರಂದು ಸುರಿದ ಧಾರಾಕಾರ ಮಳೆಗೆ ಆ.25 ರಂದು ಸಂಜೆ 6ಕ್ಕೆ ಕಟ್ಟಡದ ಒಂದು ಭಾಗ ಕುಸಿದು ನಾಲ್ವರು ಮೃತಪಟ್ಟಿದ್ದರು. ಲ್ಯಾನ್ಸ್‌ಡೌನ್ ಕಟ್ಟಡದ ದಕ್ಷಿಣ ಭಾಗದ ಮೊದಲ ಮಹಡಿಯ ಕೊಠಡಿ ಸಂಖ್ಯೆ 10, 11 ಮತ್ತು ನೆಲಮಾಳಿಗೆಯ 17ರ ಮೇಲ್ಛಾವಣಿ ಕುಸಿದಿತ್ತು. 11 ಜನವರಿ 2015 ರಂದು ಲ್ಯಾನ್ಸ್‌ಡೌನ್ ಕಟ್ಟಡದ ಜತೆಗೆ ದುಸ್ಥಿತಿಯಲ್ಲಿದ್ದ ಶತಮಾನದ ಇತಿಹಾಸ ಹೊಂದಿರುವ ದೇವರಾಜ ಮಾರುಕಟ್ಟೆ ಸಂರಕ್ಷಣಾ ಕಾರ್ಯಕ್ಕೆ ಚಾಲನೆ ದೊರೆಯಿತು. ದೇವರಾಜ ಮಾರುಕಟ್ಟೆಯನ್ನು 9 ಕೋಟಿ ರೂ., ಲ್ಯಾನ್ಸ್‌ಡೌನ್ ಕಟ್ಟಡವನ್ನು 6 ಕೋಟಿ ರೂ.ವೆಚ್ಚದಲ್ಲಿ ಸಂರಕ್ಷಣೆ ಮಾಡುವ ಕಾಮಗಾರಿ ಕೈಗೊಳ್ಳಲಾಯಿತು. ಆದರೆ, 28 ಆಗಸ್ಟ್ 2016 ರಂದು ದೇವರಾಜ ಮಾರುಕಟ್ಟೆ ಸಂರಕ್ಷಣಾ ಕಾರ್ಯ ಸಂದರ್ಭ ಕಟ್ಟಡದ ಒಂದು ಭಾಗ ಕುಸಿದು ಬಿತ್ತು. ಹೀಗಾಗಿ ಲ್ಯಾನ್ಸ್‌ಡೌನ್ ಹಾಗೂ ದೇವರಾಜ ಮಾರುಕಟ್ಟೆಯ ಅಭಿವೃದ್ಧಿ ಕಾರ್ಯವನ್ನು ಕೈ ಬಿಡಲಾಯಿತು. ನಂತರ ಕಟ್ಟಡ ಸಂರಕ್ಷಣೆ ವಿಚಾರದಲ್ಲಿ ಸಾಕಷ್ಟು ಪರ-ವಿರೋಧದ ಚರ್ಚೆಗಳು, ಹೋರಾಟಗಳು ನಡೆಯಿತು. ಅಲ್ಲದೆ, ಹೈಕೋರ್ಟ್‌ನಲ್ಲಿ ಸುದೀರ್ಘ ಕಾನೂನು ಹೋರಾಟ ನಡೆಯಿತು. ಕಾನೂನು ಹೋರಾಟ ಇದೀಗ ಸುಪ್ರೀಂಕೋರ್ಟ್‌ನಲ್ಲಿ ಮುಂದುವರೆದಿದೆ.
ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‌ಡೌನ್ ಕಟ್ಟಡಗಳ ವಿಚಾರ ಸುಪ್ರೀಂಕೋರ್ಟ್‌ನಲ್ಲಿ ಇದೆ. ಹೀಗಿರುವಾಗ ಕಟ್ಟಡಗಳನ್ನು ಕೆಡವಿ ಹೊಸದಾಗಿ ನಿರ್ಮಿಸಲಾಗುವುದು ಎಂಬ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿಕೆ ಸರಿಯಲ್ಲ. ಸರ್ಕಾರ ನಾಡಿನ ಪರಂಪರೆ ಉಳಿಸುವ ಕಡೆಗೆ ಗಮನ ಹರಿಸಬೇಕೇ ಹೊರತು ಕೆಡವಲು ಆಸಕ್ತಿ ತೋರಬಾರದು. ಈ ಎರಡು ಕಟ್ಟಡಗಳು ನೆಲಸಮವಾದರೆ ನಗರದ ಉಳಿದೆಲ್ಲ ಕಟ್ಟಡಗಳು ಹಂತ ಹಂತವಾಗಿ ನೆಲಸಮಗೊಳ್ಳುವುದು ನಿಶ್ಚಿತ. ಮುಂದಿನ ದಿನಗಳಲ್ಲಿ ಮೈಸೂರು ಪಾರಂಪರಿಕ ನಗರಿ ಎಂಬ ಪಟ್ಟವನ್ನೇ ಕಳೆದುಕೊಳ್ಳುವ ಆತಂಕ ಇದೆ. ಮೈಸೂರು ಮಹಾರಾಜರು ದೇವರಾಜ, ಲ್ಯಾನ್ಸ್‌ಡೌನ್, ಮಂಡಿ ಹಾಗೂ ವಾಣಿವಿಲಾಸ ಮಾರುಕಟ್ಟೆ ನಿರ್ಮಿಸಿದ್ದಾರೆ. ಇಷ್ಟು ವರ್ಷಗಳಲ್ಲಿ ಸರ್ಕಾರ ಒಂದಾದರೂ ಇಂತಹ ಮಾರುಕಟ್ಟೆಯನ್ನು ನಿರ್ಮಿಸಿದೆಯೇ? ಸರ್ಕಾರ ಇನ್ನಾದರೂ ಮನಸ್ಸು ಬದಲಾಯಿಸಿ ಕಟ್ಟಡಗಳ ಸಂರಕ್ಷಣೆಗೆ ಆಸಕ್ತಿ ತೋರಬೇಕು.
ಪ್ರೊ.ಎನ್.ಎಸ್. ರಂಗರಾಜು, ಸದಸ್ಯ, ಜಿಲ್ಲಾ ಪಾರಂಪರಿಕ ಸಮಿತಿ