ಪರಿಹಾರ ವಿತರಿಸುವಂತೆ ಕರವೇ ಆಗ್ರಹ

HN 27-2
Published on

ವಿಜಯಪುರ: ಜಿಲ್ಲೆಯಲ್ಲಿ ಪ್ರವಾಹದಿಂದ ತತ್ತರಿಸಿದ ರೈತಾಪಿ ವರ್ಗಕ್ಕೆ ತಕ್ಷಣವೇ ಸರ್ಕಾರ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಂಗಳವಾರ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಔದ್ರಾಮ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕರವೇ ಜಿಲ್ಲಾಧ್ಯಕ್ಷ ಎಂ.ಸಿ.ಮುಲ್ಲಾ ಮಾತನಾಡಿ, ಜಿಲ್ಲೆಯ ಆಲಮೇಲ ಮತ್ತು ಇಂಡಿ, ಸಿಂದಗಿ, ಚಡಚಣ ತಾಲೂಕಿನಲ್ಲಿ ಪ್ರವಾಹದಿಂದ ಹೆಚ್ಚಿನ ರೀತಿಯಲ್ಲಿ ಹಾನಿಯಾಗಿದೆ. ಈ ಭಾಗದ ಜನರು ತತ್ತರಿಸಿದ್ದಾರೆ. ಮನೆಗಳು ಕುಸಿದಿವೆ. ರೈತರ ಜಮೀನುಗಳಿಗೆ ನೀರು ನುಗ್ಗಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಸಂಪೂರ್ಣ ನಾಶವಾಗಿವೆ. ಜಾನುವಾರುಗಳಿಗೆ ಮೇವು ಇಲ್ಲದೆ ಪರದಾಡುತ್ತಿವೆ. ಈವರೆಗೂ ಸರ್ಕಾರದಿಂದ ಯಾವುದೇ ಪರಿಹಾರ ದೊರಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉತ್ತರ ಕರ್ನಾಟಕದಲ್ಲಿ ಮಳೆಯಿಂದ ಹಾನಿಯಾದ ಬೆಳೆಗಳ ವೀಕ್ಷಣೆಗೆ ವೈಮಾನಿಕ ಸಮೀಕ್ಷೆ ಹಮ್ಮಿಕೊಂಡಿದ್ದರು. ಆದರೆ ವಿಜಯಪುರ, ಬಾಗಲಕೋಟೆ ಭಾಗಕ್ಕೆ ಭೇಟಿ ನೀಡದಿರುವುದು ರಾಜ್ಯದ ಜನರಿಗೆ ಅನ್ಯಾಯ ಮಾಡಿದಂತಾಗಿದೆ. ಮುಖ್ಯಮಂತ್ರಿಗಳಿಗೆ ಜನಪರ ಕಾಳಜಿ ಇಲ್ಲ ಎನ್ನುವುದು ಇದರಿಂದ ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕರವೇ ಜಿಲ್ಲಾ ಸಂಚಾಲಕ ಸಾಯಬಣ್ಣ ಮಡಿವಾಳರ, ನಗರ ಅಧ್ಯಕ್ಷ ಯಾಜ ಕಲಾದಗಿ, ಜಿಲ್ಲಾ ಕಾರ್ಯದರ್ಶಿ ದಸ್ತಗೀರ ಸಾಲೋಟಗಿ, ಜಿಲ್ಲಾ ಉಪಾಧ್ಯಕ್ಷ ಮಾದೇವ ರಾವಜಿ, ಸೈಯ್ಯದ್ ದೇವರಮನಿ, ಶಶಿಧರ ಗಣಿಯಾರ, ಗಂಗಾಧರ ಭೋವಿ, ರಜಾಕ್ ಕಾಖಂಡಕಿ, ಎಂ.ಎಸ್.ಶಿರಬೂರ, ಶರಣಯ್ಯ ನಂದಿಕೋಲ, ಐ.ಸಿ.ಪಠಾಣ, ಡಿ.ಎಸ್.ಪೂಜಾರಿ, ಆಸೀಫ್ ಪೀರವಾಲೆ, ದಸ್ತಗೀರ ವಡಗೇರಿ, ದಾದಾಪೀರ ಮುಜಾವರ, ಬಾಬು ಯಾಳವಾರ ಮುಂತಾದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net