

ಸಿದ್ದಾಪುರ : ಆರ್‌ಸಿಬಿ ಕ್ರಿಕೆಟ್ ತಂಡದ ಗೆಲುವಿನ ಸಂಭ್ರಮಾಚರಣೆಯ ಹೊತ್ತಿನಲ್ಲಿ ಅವೈಜ್ಞಾನಿಕ, ಅವ್ಯವಸ್ಥಿತ ಆಯೋಜನೆಯಿಂದಾಗಿ ಕಾಲ್ತುಳಿತಕ್ಕೆ ಸಿಲುಕಿ 11 ಜೀವ ಬಲಿಯಾಗಿದೆ. ಇದರ ಹೊಣೆಯನ್ನು ಕರ್ನಾಟಕ ಸರ್ಕಾರ ಹೊರಬೇಕು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಜಿಲ್ಲಾ ಕಾರ್ಯದರ್ಶಿ ಎಚ್.ಬಿ. ರಮೇಶ ತಿಳಿಸಿದ್ದಾರೆ.
ಐಪಿಎಲ್ ಒಂದು ಖಾಸಗಿ ಸಂಸ್ಥೆ ಆಯೋಜಿಸಿದ ಕ್ರೀಡಾಕೂಟವಾಗಿದ್ದು, ಅದರ ಗೆಲುವು ನಲಿವುಗಳನ್ನು ಕ್ರೀಡಾ ಪ್ರೇಮಿಗಳು ಅವರಿಗೆ ಬೇಕಾದ ಹಾಗೆ ಸಂಭ್ರಮಿಸಿದ್ದಾರೆ. ಆದರೆ ಸರ್ಕಾರವೊಂದು ಕ್ರೀಡೆಯನ್ನು ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಿ ಹತ್ತಾರು ಜೀವ ಬಲಿಗೆ ಕಾರಣವಾಗಿರುವುದನ್ನು ಅವರು ಹೇಳಿಕೆಯಲ್ಲಿ ಖಡಿಸಿದ್ದಾರೆ.
ವಿಜಯೋತ್ಸವ ಮಾಡುವಾಗ ಸರಿಯಾದ ಪೂರ್ವ ಸಿದ್ಧತೆಗಳನ್ನು ಬಂದೋಬಸ್ತ್ ಮಾಡಿಕೊಳ್ಳದೇ ಅವಸರದಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದು ದುರಂತಕ್ಕೆ ಕಾರಣವಾಗಿದೆ. ಸಮಗ್ರ ತನಿಖೆಯ ಮೂಲಕ ಬಹಿರಂಗ ಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಗಾಯಾಳುಗಳಿಗೆ ಸರ್ಕಾರದ ಖರ್ಚಿನಲ್ಲಿ ಚಿಕಿತ್ಸೆ ಕೊಡಿಸಬೇಕು ಹಾಗೂ ದುರಂತದಲ್ಲಿ ಸಾವಿಗೀಡಾದವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.