ಒಳ ಮೀಸಲು ಕಲ್ಪಿಸಲು ಸರ್ಕಾರ ಸಿದ್ಧ

HSD madiga samaja 10 p1
Published on

ಹೊಸದುರ್ಗ: ಬಡವರು, ಶೋಷಿತರು, ಅಹಿಂದ ವರ್ಗದ ಹಿತ ರಕ್ಷಿಸಲು ಹಾಗೂ ಅವರನ್ನು ಮುಖ್ಯವಾಹಿನಿಗೆ ತರಲು ಕಾಂಗ್ರೆಸ್ ಪಕ್ಷ ಬದ್ಧವಾಗಿದ್ದು, ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ತಾಲೂಕು ಮಾದಿಗ ಸಮಾಜ ಪಟ್ಟಣದ ಆಶೋಕ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸಮುದಾಯದ ಸಚಿವರು, ಶಾಸಕರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಮಾದಿಗ ಸೇರಿ ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಮೀಸಲು ಸೌಲಭ್ಯ ವರ್ಗಿಕರಣದ ಅವಶ್ಯಕತೆಯಿದೆ. ಜನಸಂಖ್ಯೆಯ ಆಧಾರದ ಮೇಲೆ ಒಳ ಮೀಸಲು ಕಲ್ಪಿಸಲು ಸರ್ಕಾರ ಬದ್ದವಾಗಿದೆ. ಲಂಬಾಣಿ, ಭೋವಿ ಸೇರಿದಂತೆ ಯಾವುದೇ ಸಮುದಾಯಗಳಿಗೆ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ ಎಂದರು.

ಜಾತ್ಯಾತೀತ ಪಕ್ಷಗಳು ಒಂದಾಗಬೇಕು ಎನ್ನುವ ಉದ್ದೇಶದಿಂದ 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡಿತ್ತು. ಅದರೆ, ಅವರು ಆಡಳಿತದಲಿ ವಿಫಲಗೊಂಡು, ಕೆಲವು ಶಾಸಕರು ಬಿಜೆಪಿಗೆ ಹೋಗುವಂತಾಯಿತು. ಇಂತಹ ವ್ಯವಸ್ಥೆಯಿಂದ ಬೆಸತ್ತ ಜನ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ ಎಂದು ಹೇಳಿದರು.

ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾದಿಗ ಸಮುದಾಯ ಸೇರಿ ಎಲ್ಲ ಬಡ ಜನರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.

ಅನ್ನಕ್ಕಾಗಿ ಬೇಡುವುದನ್ನು ತಪ್ಪಿಸಿ ಜನರು ಸ್ವಾಭಿಮಾನಿಯಾಗಿ ಬದುಕಲು ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಯೋಜನೆ ತರಲಾಗಿದೆ. ಮಾದಿಗರು ಶೈಕ್ಷಣಿಕ ಪ್ರಗತಿ ಸಾಧಿಸುವ ಮೂಲಕ ಸಾಮಾಜಿಕ, ಆರ್ಥಿಕವಾಗಿ ಬಲಿಷ್ಠಗೊಳ್ಳಬೇಕು ಎಂದು ಹೇಳಿದರು.

ಮಾಯಕೊಂಡ ಶಾಸಕ ಬಿ.ಬಸವಂತಪ್ಪ, ಕೆಪಿಸಿಸಿ ಅಸಂಘಟಿತ ಕಾರ್ಮಿಕ ಸಂಘಟನೆ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್ ಮಾತನಾಡಿದರು. ಮುಖಂಡರಾದ ರಾಜಪ್ಪ, ತಿಪ್ಪೇಸ್ವಾಮಿ, ದಾಸಪ್ಪ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net