

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯದ ವಿವಿಧ ಭಾಗಗಳಲ್ಲಿ ಸಿಇಟಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಜನಿವಾರ ತೆಗೆಯಿಸಿ ಅವಮಾನಿಸಿದ ಪ್ರಕರಣಕ್ಕೆ ಸರ್ಕಾರವೇ ಹೊಣೆ. ಮುಖ್ಯಮಂತ್ರಿಗಳೇ ವಿವಾದದ ಹೊಣೆ ಹೊತ್ತು ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆಗ್ರಹಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಬರೀ ಮುಸ್ಲಿಂರ ಓಲೈಕೆಯಲ್ಲಿ ತೊಡಗಿದೆ. ಇದಕ್ಕಾಗಿ ಬಹುಕಾಲದಿಂದ ಜನರು ನಂಬಿಕೊಂಡು ಬಂದಿರುವ ಸಂಸ್ಕೃತಿ, ನಂಬಿಕ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಖಂಡನೀಯ. ಕೂಡಲೇ ಇದಕ್ಕೆ ಕಾರಣರಾದ ಹಿರಿಯ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಖಂಡನೀಯ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬಂದಾಗಿನಿಂದ ಸಮಾಜ ಒಡೆಯುವ ಹುನ್ನಾರ ನಡೆಸಿದೆ. ಈ ದಿಸೆಯಲ್ಲಿ ಆಡಳಿತವನ್ನು ಸಂಪೂರ್ಣ ಅಲ್ಪಸಂಖ್ಯಾತರ ಹಿತ ಕಾಯಲು ಬಳಸಲಾಗುತ್ತಿದೆ ಎಂದು ಟೀಕಿಸಿದರು.
ಹಿಂದೂ ಧರ್ಮದ ಅವಿಭಾಜ್ಯವಾಗಿರುವ ಜನಿವಾರ, ಶಿವದಾರ, ವಿಭೂತಿ, ಕುಂಕುಮಗಳನ್ನು ಅವಮಾನಿಸುತ್ತಿದ್ದರೆ ಇನ್ನೊಂದೆಡೆ ಬುರ್ಖಾ, ಹಿಜಾಬ್ಗಳಿಗೆ ಯಾವುದೇ ವಿರೋಧ ಇಲ್ಲದಿರುವುದು ಸರ್ಕಾರ ಮುಸಲ್ಮಾನರಿಗೆ ಮಾತ್ರ ಎನ್ನುವಂತಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಈ ಕಾರಣದಿಂದ ಜನರ ಗಮನ ಬೇರೆಡೆ ಸೆಳೆಯಲು ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತರುತ್ತಿದೆ. ಮರೆಮಾಚುವ ವಿಷಯದಲ್ಲಿ ಸಿಎಂ ಸಿದ್ಧಹಸ್ತರು ಎಂದು ಆರೋಪಿಸಿದರು.
ಹು-ಧಾ ಅವಳಿನಗರದ ಬಿಆರ್ಟಿಎಸ್ ಬದಲು ರಾಜ್ಯ ಸರ್ಕಾರ ತರುತ್ತಿರುವ ಹೊಸ ಯೋಜನೆ ಸ್ವಾಗತಾರ್ಹ. ಬಿಆರ್ಟಿಎಸ್ ಅವ್ಯವಸ್ಥೆಯಿಂದ ಅವಳಿನಗರದ ಮಧ್ಯೆ ಸಂಚಾರ ವ್ಯವಸ್ಥೆ ಹದಗೆಟ್ಟಿತ್ತು. ನಾನು ಸೇರಿ ಅನೇಕ ಸಂಘಟನೆಗಳು, ಸಾರ್ವಜನಿಕರು ಬಿಆರ್ಟಿಎಸ್ ಅಧ್ವಾನಕ್ಕೆ ಬೇಸತ್ತು ವಿರೋಧಿಸುತ್ತಿದ್ದಾರೆ. ಸರ್ಕಾರ ಸಾರಿಗೆ ವ್ಯವಸ್ಥೆ ಸರಿಪಡಿಸಲು ನೂತನ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಇದರಿಂದ ಜನರಿಗೆ ಅನುಕೂಲವಾಗಲಿದೆ ಎಂಬ ಆಶಯ ಇದೆ. ಸರ್ಕಾರ ಎಲ್ಲ ಸಾಧಕ-ಬಾಧಕ ಪರಿಶೀಲಿಸಿ ಅನುಷ್ಠಾನಗೊಳಿಸಿದರೆ ಉತ್ತಮ. ಈ ದಿಸೆಯಲ್ಲಿ ಉಸ್ತುವಾರಿ ಸಚಿವರು ತಮ್ಮನ್ನು ಸಭೆ ಕರೆದರೆ ಅಭಿಪ್ರಾಯವನ್ನು ತಿಳಿಸುವುದಾಗಿ ಬೆಲ್ಲದ ಹೇಳಿದರು.