

ಮೈಸೂರು: ನಗರದಲ್ಲಿರುವ ರಾಷ್ಟ್ರಕವಿ ಕುವೆಂಪು ಅವರ ಮನೆ ‘ಉದಯರವಿ’ಯನ್ನು ಸ್ಮಾರಕವಾಗಿ ಅಭಿವೃದ್ಧಿ ಪಡಿಸಲು ಸರ್ಕಾರ ಇನ್ನೂ ಕ್ರಮ ವಹಿಸದೆ ಇರುವುದು ಬೇಸರದ ಸಂಗತಿ ಎಂದು ಸಾಹಿತಿ ಪ್ರೊ.ಸಿ.ನಾಗಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ವತಿಯಿಂದ ಘಟಿಕೋತ್ಸವ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕುವೆಂಪು ಅವರು ಕನ್ನಡಕ್ಕೆ ಹಲವು ಮೊದಲುಗಳನ್ನು ತಂದುಕೊಟ್ಟ ಕವಿಯಾಗಿದ್ದಾರೆ. ಅವರ ಮನೆಯನ್ನು ಸ್ಮಾರಕವಾಗಿ ಮಾಡಲು ಸರ್ಕಾರ ನಿರ್ಧರಿಸಿತ್ತು. ಆದರೆ, ಈ ವಿಚಾರದಲ್ಲಿ ಸರ್ಕಾರ ವಿಳಂಬ ನೀತಿ ತೋರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕುವೆಂಪು ಕುಟುಂಬ ವರ್ಗದವರೇ ಮನೆಯನ್ನು ಸ್ಮಾರಕವನ್ನಾಗಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿ ಕೇಳಿದ್ದೇನೆ. ಇದು ಅತ್ಯಂತ ವಿಷಾದನೀಯ ಸನ್ನಿವೇಶ. ಸರ್ಕಾರ ಯಾವ್ಯಾವುದಕ್ಕೋ ಹಣವನ್ನು ಖರ್ಚು ಮಾಡುತ್ತಿದೆ. ಆದರೆ, ಕುವೆಂಪು ಮನೆಯನ್ನು ಏತಕ್ಕೆ ಸ್ಮಾರಕವಾಗಿಸಲು ಸರ್ಕಾರ ಹಿಂದೇಟು ಹಾಕುತ್ತಿದೆಯೋ ತಿಳಿಯದು ಎಂದರು.
ಕನ್ನಡವು ಜಗತ್ತಿನ ಎಲ್ಲ ಜ್ಞಾನದ ವಾಹಕವಾಗಬೇಕು ಎಂದು ಕುವೆಂಪು ಕನಸು ಕಂಡಿದ್ದರು. ಅದರ ಫಲವಾಗಿ ವಿಜ್ಞಾನ, ತಂತ್ರಜ್ಞಾನದ ಕೃತಿಗಳು, ಪಠ್ಯ ಪುಸ್ತಕಗಳು ಕನ್ನಡದಲ್ಲಿ ದೊರೆಯುವಂತೆ ಮಾಡಿದರು. ಆದರೆ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗದೆ ಇರುವುದು ದುರ್ದೈವ. ಆ ಮಾರ್ಗವನ್ನು ಅನುಸರಿಸಿದರೆ ಮಾತ್ರ ಕನ್ನಡವನ್ನು ಅನ್ನದ ಭಾಷೆಯಾಗಿ ಪರಿವರ್ತಿಸಬಹುದು. ಯಾವ ಭಾಷೆ ಅನ್ನ ಕೊಡುತ್ತದೆಯೋ ಆ ಭಾಷೆಯನ್ನು ಎಲ್ಲರೂ ಕಲಿಯುತ್ತಾರೆ. ಅಂತಹ ಸಂದರ್ಭದಲ್ಲಿ ಕನ್ನಡ ಕಲಿಯಿರಿ ಎಂದು ಯಾರೂ ಬಲವಂತ ಮಾಡುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದರು.
ಕನ್ನಡ ಶಾಲೆಯನ್ನು ನಿರಂತರವಾಗಿ ಮುಚ್ಚಲಾಗುತ್ತಿದ್ದು, ಮುಚ್ಚಿರುವ ಶಾಲೆಗಳು ಪುನರಾರಂಭಗೊಳ್ಳಬೇಕು. ಕನ್ನಡದ ಶಾಲೆಗಳಿಗೆ ಪ್ರೋತ್ಸಾಹ ದೊರೆಯಬೇಕಾಗಿದೆ. ನಮ್ಮ ಭಾಷೆ ಹಾಗೂ ಸಂಸ್ಕೃತಿಯ ದೃಷ್ಟಿಯಿಂದ ಇದು ಅನಿವಾರ್ಯ. ನಾವು ಅಸಹಾಯಕರು ಎಂದು ಕೈಚಲ್ಲಿ ಕೂರಬಾರದು. ಕನ್ನಡ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಸಹಾಯ ಹಸ್ತ ಚಾಚಬೇಕಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಕುಲಪತಿ ಡಾ. ಶರಣಪ್ಪ ವಿ. ಹಲಸೆ, ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ, ಶೈಕ್ಷಣಿಕ ಡೀನ್ ಪ್ರೊ.ಎನ್. ಲಕ್ಷ್ಮೀ, ಹಣಕಾಸು ಅಧಿಕಾರಿ ಡಾ.ಎಸ್. ನಿರಂಜನ್‌ರಾಜ್, ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಆರ್.ಚಂದ್ರೇಗೌಡ ಇದ್ದರು.