ಎಪಿಎಂಸಿ ಅಭಿವೃದ್ಧಿಗೆ ಸರ್ಕಾರ ಬದ್ಧ

h31-abbayya
Published on

ಹುಬ್ಬಳ್ಳಿ: ಏಷ್ಯಾದಲ್ಲೇ ಅತೀ ದೊಡ್ಡ ಕೃಷಿ ಉತ್ಪನ್ನ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿಯ ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ) ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ ಎಂದು ಶಾಸಕ ಪ್ರಸಾದ ಅಬ್ಬಯ್ಯ ವಾಗ್ದಾನ ನೀಡಿದರು.
ಇಲ್ಲಿಯ ಬೈರಿದೇವರಕೊಪ್ಪದ ಬಳಿಯ ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಭಾನುವಾರ ಭೇಟಿ ನೀಡಿ ವರ್ತಕರಿಂದ ಅಹವಾಲು ಸ್ವೀಕರಿಸಿದ ನಂತರ ಮಾತನಾಡಿದರು.
ಮಳಿಗೆ ಮತ್ತು ನಿವೇಶನ ಹಂಚಿಕೆ ಬಗ್ಗೆ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಹಿಂದೆ ಹಂಚಿಕೆ ಮಾಡಿದ ನಿವೇಶನ ಮತ್ತು ಮಳಿಗೆಗಳಲ್ಲಿ ವರ್ತಕರು ವ್ಯಾಪಾರ ನಡೆಸುತ್ತಿಲ್ಲ ಎಂಬ ದೂರುಗಳಿವೆ. ಹಂಚಿಕೆಯಾದ ನಿವೇಶನ ಮತ್ತು ಮಳಿಗೆಗಳಲ್ಲಿ ವ್ಯಾಪಾರ ಚಟುವಟಿಕೆಗಳು ನಡೆಯದೆ ಇದ್ದಲ್ಲಿ ನೋಟಿಸ್ ನೀಡಿ ಹಂಚಿಕೆಯಾದ ನಿವೇಶನ ಮತ್ತು ಮಳಿಗೆಯನ್ನು ಮರಳಿ ಪಡೆಯಲು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತರಕಾರಿ ಮಾರುಕಟ್ಟೆ ಮತ್ತು ಹಣ್ಣು ವ್ಯಾಪಾರಸ್ಥರ ಮಳಿಗೆ ಹಿಂಭಾಗದ ಖಾಲಿ ನಿವೇಶನದಲ್ಲಿ ಇನ್ನಷ್ಟು ಮಳಿಗೆ ನಿರ್ಮಾಣ ಮಾಡುವ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ವರ್ತಕರ ಸೂಕ್ತ ಸಲಹೆ ಮೇರೆಗೆ ನಿರ್ಣಯ ಕೈಗೊಳ್ಳಲಾಗುವುದು. ವರ್ತಕರು ಗಾಳಿ ಸುದ್ದಿಗೆ ಕಿವಿಕೊಡುವ ಅಗತ್ಯವಿಲ್ಲ. ಒಂದು ವೇಳೆ ಯಾರಾದರೂ ಮಳಿಗೆ ಹಂಚಿಕೆಗೆ ಹಣದ ಬೇಡಿಕೆಯಿಟ್ಟ ಮಾಹಿತಿ ಸಿಕ್ಕರೆ, ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ, ಹಂಚಿಕೆಯಾಗಿರುವ ಮಳಿಗೆಗಳ ಸದುಪಯೋಗ ಮಾಡಿಕೊಳ್ಳದೇ ಇರುವವರ ವಿರುದ್ಧ ಕ್ರಮ ಸೇರಿದಂತೆ ತಮ್ಮ ಎಲ್ಲ ಬೇಡಿಕೆಗಳ ಬಗ್ಗೆ ಶೀಘ್ರವೇ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net