

ಬೀಳಗಿ : ಬಂಜಾರ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಬಂಜಾರ ಸಮಾಜ ಬಾಂಧವರು ಶ್ರಮಜೀವಿಗಳು. ಇತರ ಸಮಾಜದೊಂದಿಗೆ ಅತ್ಯಂತ ಪ್ರೀತಿ, ವಿಶ್ವಾಸ, ನಂಬಿಕೆಯಿಂದ ನಡೆಕೊಳ್ಳುತ್ತಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಬಣ್ಣಿಸಿದರು.
ತಾಲೂಕಿನ ಸುನಗ ತಾಂಡಾ ನಂ.1 (ದತ್ತಾಪುರ)ರಲ್ಲಿ ಶನಿವಾರ ಎಸ್‌ಸಿ ಕಾಲನಿಯಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬೀಳಗಿ ಮತಕ್ಷೇತ್ರದ ವ್ತಾಪ್ತಿಯಲ್ಲಿ ಬರುವ ತಾಂಡಾಗಳಲ್ಲಿ ಕುಡಿಯುವ ನೀರು, ರಸ್ತೆ ಅಭಿವೃದ್ಧಿ ಮನೆ ಮನೆಗೆ ನಳ ಜೋಡಣೆ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ. ಕೃಷ್ಣಾ ಭಾಗ್ಯ ಜಲ ನಿಗಮ, ಸಣ್ಣ ನೀರಾವರಿ, ತಾಂಡಾ ಅಭಿವೃದ್ಧಿ ನಿಗಮ ಹಾಗೂ ವಿವಿಧ ಇಲಾಖೆಯಲ್ಲಿ ರೈತರ ಖುಷ್ಕಿ ಜಮೀನುಗಳಿಗೆ ಬೋರ್‌ವೆಲ್ ಕೊರೆಸಲಾಗಿದೆ. ಸಾರ್ವಜನಿಕರು ಕೂಡ ತಮ್ಮ ಯಾವುದೇ ಸಮಸ್ಯೆ ಇದ್ದರೆ ಮುಕ್ತ ಮನಸ್ಸಿನಿಂದ ಪರಿಹಾರ ಪಡೆದುಕೊಳ್ಳಬೇಕು ಎಂದರು.
ಸುನಗ ತಾಂಡಾದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 17ಲಕ್ಷ ರೂ. ಅನುದಾನ ಒದಗಿಸಲಾಗಿದೆ. ಕೆಲವೇ ದಿನಗಳಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ ಎಂದರು. ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಮುಂದಾಗಬೇಕು. ಮಕ್ಕಳ ಕಲಿಕೆಗಾಗಿ ಸರ್ಕಾರ ಸಾಕಷ್ಟು ಸೌಲಭ್ಯ ನೀಡುತ್ತಿದೆ. ಅದರ ಲಾಭವನ್ನು ಪಡೆದುಕೊಳ್ಳಬೇಕು ಎಂದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರಭು ಲಮಾಣಿ, ಮಲ್ಲಪ್ಪ ತೋಳಮಟ್ಟಿ, ದೇನಪ್ಪ ಲಮಾಣಿ, ಕೃಷ್ಣಪ್ಪ ಲಮಾಣಿ, ಶಂಕರ ಲಮಾಣಿ, ಶಂಕರ ಪಾಂಡು ಲಮಾಣಿ, ಶಂಕರ ಜೌಧವ, ಟೋಪು ಲಮಾಣಿ, ಹಣಮಂತ ಪವಾರ, ಕೇಸು ಲಮಾಣಿ ಇದ್ದರು.