ಅರ್ಚಕರಿಗೆ ಸರ್ಕಾರ ವಿಮಾ ಸುರಕ್ಷೆ: 5 ಲಕ್ಷ ರೂ. ಆರೋಗ್ಯ, 5-7 ಲಕ್ಷ ರೂ. ಜೀವ ವಿಮೆ

Priest
Published on

| ವಿಲಾಸ ಮೇಲಗಿರಿ ಬೆಂಗಳೂರು

ರಾಜ್ಯದ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳ ಸುಮಾರು 40-50 ಸಾವಿರ ಅರ್ಚಕರ ರಕ್ಷಣೆಗೆ ಸರ್ಕಾರ ಸಮಗ್ರ ಯೋಜನೆ ಜಾರಿಗೊಳಿಸಲು ಸಜ್ಜಾಗಿದೆ.

ಮುಜರಾಯಿ ಇಲಾಖೆಯಡಿ ಸುಮಾರು 34 ಸಾವಿರ ದೇವಸ್ಥಾನಗಳಿವೆ. ಅಲ್ಲಿನ ಅರ್ಚಕರಿಗೆ ಆರೋಗ್ಯ ಹಾಗೂ ಜೀವ ವಿಮೆ, ಪಿಂಚಣಿ ನೀಡಲು ಸರ್ಕಾರ ಮುಂದಾಗಿದೆ. 15-20 ದಿನಗಳಲ್ಲಿ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗುತ್ತದೆ.

ಅರ್ಚಕರು ಹಾಗೂ ದೇವಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುವ ಇತರ ಉದ್ಯೋಗಿಗಳು ಹಾಗೂ ಅವರ ಕುಟುಂಬ ಈ ಯೋಜನೆಗಳ ಪ್ರಯೋಜನ ಪಡೆಯಲಿವೆ.

ಆರೋಗ್ಯ ವಿಮೆ ನೀಡುವ ಸಂಬಂಧ ಉನ್ನತ ಮಟ್ಟದ ಚರ್ಚೆ ನಡೆದಿದ್ದು, ಆರೋಗ್ಯ ಕರ್ನಾಟಕ-ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ವಿಮೆ ಸೌಲಭ್ಯ ಕಲ್ಪಿಸಬೇಕೆ? ಆ ಯೋಜನೆಯಲ್ಲಿ ಇರುವ ಕಾಯಿಲೆಗಳಿಗೆ ಮಾತ್ರ ಸೌಲಭ್ಯ ಕಲ್ಪಿಸಬೇಕೆ? ಇನ್ನೂ ಹೆಚ್ಚಿನ ಕಾಯಿಲೆಗಳನ್ನು ಸೇರ್ಪಡೆ ಮಾಡಬೇಕೆ? ಎಂಬ ಬಗ್ಗೆ ಇನ್ನಷ್ಟೇ ತೀರ್ಮಾನ ಕೈಗೊಳ್ಳಬೇಕಿದೆ.

5 ಲಕ್ಷ ರೂ.ವರೆಗೆ ಚಿಕಿತ್ಸೆ: ದೇವಸ್ಥಾನಗಳ ಅರ್ಚಕರು ಹಾಗೂ ಸಿಬ್ಬಂದಿಗೆ 5 ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸಾ ಸೌಲಭ್ಯ ಕಲ್ಪಿಸಬೇಕು. ಆರೋಗ್ಯ ಕರ್ನಾಟಕ-ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ನೋಂದಾಯಿತ ಎಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ಆಲೋಚನೆ ನಡೆದಿದೆ.

5-7 ಲಕ್ಷ ರೂ. ಜೀವ ವಿಮೆ ಸೌಲಭ್ಯ: ಅರ್ಚಕರು ಹಾಗೂ ಸಿಬ್ಬಂದಿ ನಾನಾ ಕಾರಣಗಳಿಂದ ಮೃತಪಟ್ಟರೆ, ಶಾಶ್ವತ ಅಂಗವೈಕಲ್ಯ ಉಂಟಾದರೆ ಜೀವ ವಿಮಾ ಸೌಲಭ್ಯ ಒದಗಿಸುವ ಬಗ್ಗೆ ಈಗಾಗಲೆ ಜೀವ ವಿಮಾ ನಿಗಮದ ಅಧಿಕಾರಿಗಳ ಜತೆ ಸರ್ಕಾರ ಒಂದು ಸುತ್ತಿನ ಮಾತುಕತೆ ನಡೆಸಿದೆ. 5-7 ಲಕ್ಷ ರೂ.ವರೆಗೆ ಜೀವ ವಿಮೆ ಸವಲತ್ತು ದೊರಕಿಸಿಕೊಡುವ ಕುರಿತು ಚರ್ಚೆಯಾಗಿದೆ. ಇದಕ್ಕೆ ಸಂಬಂಧಿಸಿದ ವಿಮಾ ಕಂತನ್ನು ಸರ್ಕಾರವೇ ಭರಿಸಬೇಕೆ? ಅಥವಾ ಸಿಬ್ಬಂದಿಯಿಂದಲೂ ಪಾಲು ಪಡೆಯಬೇಕೆ? ಸರ್ಕಾರದ ಪಾಲೆಷ್ಟು? ಸಿಬ್ಬಂದಿ ಪಾಲೆಷ್ಟು? ಸರ್ಕಾರದಿಂದ ಎಷ್ಟು ವೆಚ್ಚ ಭರಿಸಬೇಕಾಗುತ್ತದೆ? ಎಂಬ ಬಗ್ಗೆ ಇಲಾಖೆ ಮಾಹಿತಿ ಸಂಗ್ರಹಿಸುತ್ತಿದೆ.

ಅನಾಹುತಗಳ ಅಧ್ಯಯನ: ವಾರ್ಷಿಕವಾಗಿ ನಾನಾ ಕಾರಣಗಳಿಂದ ಮೃತಪಡುವ ದೇವಸ್ಥಾಗಳ ಅರ್ಚಕರು ಹಾಗೂ ಸಿಬ್ಬಂದಿ ಸಂಖ್ಯೆ ಎಷ್ಟು? ಸರಾಸರಿ ಅನಾಹುತಗಳು ಎಷ್ಟು ಸಂಭವಿಸಿವೆ ಎಂಬುದನ್ನು ಆಧರಿಸಿ ವಿಮಾ ಕಂತು ಪಾವತಿಸುವ ಲೆಕ್ಕ ಹಾಕಲಾಗುತ್ತಿದೆ.

ಯಾರ್ಯಾರಿಗೆ ಸೌಲಭ್ಯ?: ರಾಜ್ಯದ 34,559 ದೇವಾಲಯಗಳು ಮುಜರಾಯಿ ಇಲಾಖೆಯಡಿ ಬರಲಿದ್ದು, ಅವುಗಳಲ್ಲಿ 175 ವರ್ಗ-1(ವಾರ್ಷಿಕ 25 ಲಕ್ಷ ರೂ. ಆದಾಯ), 163 ವರ್ಗ-ಬಿ(ವಾರ್ಷಿಕ ಆದಾಯ 5 ರಿಂದ 25 ಲಕ್ಷ ರೂ. ವರೆಗೆ), 34,221 ವರ್ಗ-ಸಿ(ವಾರ್ಷಿಕ ಆದಾಯ 5 ಲಕ್ಷ ರೂ.ಗಿಂತ ಕಡಿಮೆ). ಈ ದೇವಾಲಯಗಳಲ್ಲಿ ಸುಮಾರು 50 ಸಾವಿರ ಅರ್ಚಕರು, ಗ್ರೂಪ್ ಸಿ ಮತ್ತು ಡಿ ವೃಂದದ ನೌಕರರು ಕೆಲಸ ಮಾಡುತ್ತಾರೆ. ಇವರ ವೇತನವನ್ನು ಆಯಾ ದೇವಾಲಯ/ಟ್ರಸ್ಟ್​ಗಳು ಭರಿಸುತ್ತಿವೆ. ಅನೇಕ ಅರ್ಚಕರು ಅನಾರೋಗ್ಯ, ಅಕಾಲಿಕ ನಿಧನಗಳಿಗೆ ತುತ್ತಾದಾಗ ಇಡೀ ಕುಟುಂಬವೇ ತತ್ತರಿಸುತ್ತಿದ್ದವು. ಈ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಸರ್ಕಾರ ಅರ್ಚಕರ ರಕ್ಷಣೆಗೆ ಧಾವಿಸಿದೆ. ಎಲ್ಲ ವರ್ಗದ ದೇವಸ್ಥಾನಗಳ ಅರ್ಚಕರು ಹಾಗೂ ಸಿಬ್ಬಂದಿಗೆ ಏಕರೂಪದ ಸೌಲಭ್ಯ ದೊರೆಯಲಿವೆ.

ಪಿಂಚಣಿ ಸವಲತ್ತು: ಸೇವಾವಧಿಯಲ್ಲಿ ಅತ್ಯಲ್ಪ ವೇತನ ಪಡೆದು ನಿವೃತ್ತಿ ನಂತರ ಕಷ್ಟಕರ ಜೀವನ ಸಾಗಿಸುತ್ತಿರುವ ಅರ್ಚಕರು ಹಾಗೂ ಸಿಬ್ಬಂದಿ ನಿವೃತ್ತಿ ನಂತರವೂ ನೆಮ್ಮದಿಯ ಜೀವನ ನಿರ್ವಹಿಸಬೇಕು ಎಂಬ ಹಿನ್ನೆಲೆಯಲ್ಲಿ ಪಿಂಚಣಿ ಯೋಜನೆ ಜಾರಿಗೆ ತರಲು ಸರ್ಕಾರ ಆಲೋಚನೆ ನಡೆಸಿದೆ. ಆದರೆ, ಪಿಂಚಣಿ ರೂಪದ ಹಣವನ್ನು ಒಂದು ಬಾರಿ ಇಡುಗಂಟು ರೂಪದಲ್ಲಿ ಕೊಡುವುದೆ? ಅಥವಾ ಸರ್ಕಾರಿ ನೌಕರಿಗೆ ನೀಡುವ ರೀತಿಯಲ್ಲಿ ಜೀವಿತಾವಧಿ ಮಾಸಿಕ ಪಿಂಚಣಿ ನೀಡುವುದೇ? ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಅಲ್ಲದೆ, ಇದಕ್ಕೆ ವಾರ್ಷಿಕವಾಗಿ ಬೇಕಾಗುವ ಅಂದಾಜು ಹಣವೆಷ್ಟು? ಅದನ್ನು ಸರ್ಕಾರದಿಂದ ಭರಿಸಬೇಕೆ? ಅಥವಾ ದೇವಸ್ಥಾನಗಳ ಆದಾಯದಿಂದ ನೀಡಬೇಕೆ? ಅಥವಾ ದೇವಸ್ಥಾನ ಮತ್ತು ಸರ್ಕಾರ ಪಾಲು ಹಂಚಿಕೆ ಮಾಡಿಕೊಂಡು ನೀಡಬೇಕೆ ಎಂಬ ಜಿಜ್ಞಾಸೆ ಉನ್ನತ ಮಟ್ಟದ ಅಧಿಕಾರಿಗಳ ವಲಯದಲ್ಲಿ ಶುರುವಾಗಿದೆ. ಅರ್ಚಕರು ಹಾಗೂ ಸಿಬ್ಬಂದಿಯ ಸೇವಾವಧಿ/ವಯೋಮಿತಿ ಪರಿಗಣಿಸಿ ಪಿಂಚಣಿ ನಿರ್ಧಾರಿಸಲಾಗುತ್ತದೆ. ಅಲ್ಲದೆ ಇದಕ್ಕೆ ಬೇಕಾಗುವ ಅನುದಾನ ಕ್ರೋಡೀಕರಣದ ಬಗ್ಗೆಯೂ ಗಂಭೀರ ಚಿಂತನೆ ನಡೆದಿದ್ದು, ಈ ಎಲ್ಲ ಯೋಜನೆಗಳಿಗೆ 15-20 ದಿನಗಳಲ್ಲಿ ಸ್ಪಷ್ಟ ರೂಪ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.

ದೇವಸ್ಥಾನಗಳ ಅರ್ಚಕರು ಹಾಗೂ ಸಿಬ್ಬಂದಿ ರಕ್ಷಣೆ ಸರ್ಕಾರದ ಹೊಣೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಹಾಗೂ ಜೀವ ವಿಮೆ, ಪಿಂಚಣಿ ಸೌಲಭ್ಯ ಕಲ್ಪಿಸುವ ಕುರಿತು ಶೀಘ್ರ ತೀರ್ಮಾನ ಕೈಗೊಳ್ಳುತ್ತೇವೆ. ಅರ್ಚಕರು ಹಾಗೂ ಸಿಬ್ಬಂದಿ ರಕ್ಷಣೆಗೆ ಸಮಗ್ರ ಯೋಜನೆ ರೂಪಿಸುತ್ತಿರುವುದು ದೇಶದಲ್ಲೇ ಮೊದಲು. | ಕೋಟ ಶ್ರೀನಿವಾಸ ಪೂಜಾರಿ ಧಾರ್ವಿುಕ ದತ್ತಿ ಖಾತೆ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net