

ಮಾನ್ವಿ: ಕಪಗಲ್ ಬಳಿ ಶಾಲಾ ಬಸ್ ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿಗಳ ಆರೋಗ್ಯವನ್ನು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಶುಕ್ರವಾರ ವಿಚಾರಿಸಿದರು.
ಪಟ್ಟಣದ ಆಸ್ಪತ್ರೆಗೆ ಭೇಟಿ ನೀಡಿದ್ದ ಮಾಜಿ ಶಾಸಕ, ರಾಜ್ಯ ಸರ್ಕಾರ ಮೃತ ವಿದ್ಯಾರ್ಥಿಗಳ ಕುಟುಂಬದವರಿಗೆ ಹೆಚ್ಚಿನ ಪರಿಹಾರ ನೀಡಬೇಕು. ಗಾಯಗೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ ನೀಡುವುದರೊಂದಿಗೆ ವಿದ್ಯಾರ್ಥಿಗಳ ಆಸ್ಪತ್ರೆ ವೆಚ್ಚ ಹಾಗೂ ಶಿಕ್ಷಣದ ಜವಾಬ್ದಾರಿ ವಹಿಸಿಕೊಳ್ಳಬೇಕು, ರಾಯಚೂರು-ಸಿಂಧನೂರು ಮಾರ್ಗದಲ್ಲಿ ಹಾಳಾಗಿರುವ ರಸ್ತೆ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಅಪಘಾತವಾದಲ್ಲಿ ಗಾಯಗೊಂಡಿರುವ ಬಸ್ ಪ್ರಯಾಣಿಕರ ಆರೋಗ್ಯವನ್ನು ವೆಂಕಟಪ್ಪ ನಾಯಕ ವಿಚಾರಿಸಿದರು. ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು. ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ರಾಜಾ ರಾಮಚಂದ್ರನಾಯಕ, ತಾಲೂಕು ಅಧ್ಯಕ್ಷ ಡಾ.ಈರಣ್ಣ ಮರ್ಲಟ್ಟಿ, ಹನುಮಂತ ಭೋವಿ, ವರದರಾಜ್ ಕುಲಕರ್ಣಿ, ಸುಗೂರಯ್ಯಸ್ವಾಮಿ ಇನ್ನಿತರರು ಇದ್ದರು.