

ಅವಿನಾಶ್ ಜೈನಹಳ್ಳಿ ಮೈಸೂರು
ಸರ್ಕಾರದ ಎಲ್ಲ ಯೋಜನೆಗಳ ಮಾಹಿತಿಯನ್ನೂ ಒಂದೇ ಸೂರಿನಡಿ ತಿಳಿದುಕೊಳ್ಳಬೇಕೇ? ಹಾಗಿದ್ದರೆ, ದಸರಾ ವಸ್ತುಪ್ರದರ್ಶನಕ್ಕೆ ಒಮ್ಮೆ ಭೇಟಿ ಕೊಡಿ…!
ಹೌದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ನಿರ್ಮಿಸಿರುವ ಮಳಿಗೆಯಲ್ಲಿ ರಾಜ್ಯ ಸರ್ಕಾರದ ಎಲ್ಲ ಯೋಜನೆಗಳ ಮಾಹಿತಿಯನ್ನು ಫಲಕಗಳ ಮೂಲಕ ವಿವರಿಸಲಾಗಿದೆ.
ಮುಖ್ಯವಾಗಿ ರಾಜ್ಯ ಸರ್ಕಾರದ ಕೃಷಿ, ನೀರಾವರಿ, ಬಡ ವಿದ್ಯಾರ್ಥಿಗಳ ಹಾಗೂ ಗಾಮೀಣ ಜನತೆಯ ಬದುಕನ್ನು ಹಸನಾಗಿಸಲು ರೂಪಿಸಿರುವ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ವಿಶೇಷವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಒಂದು ವರ್ಷದ ಅವಧಿಯಲ್ಲಿ ಘೋಷಿಸಿರುವ ಕಾರ್ಯಕ್ರಮ ಮತ್ತು ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ವಿದ್ಯಾರ್ಥಿಗಳಿಗೆ ನೀಡಿರುವ ವಸತಿ ನಿಲಯಗಳ ಸೌಲಭ್ಯ, ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಹೆಸರಿನಲ್ಲಿ ರಾಜ್ಯದಲ್ಲಿ 100 ಹೊಸ ವಸತಿ ನಿಲಯ ನಿರ್ಮಾಣ, ವಿಶೇಷವಾಗಿ 1,000 ವಿದ್ಯಾರ್ಥಿಗಳು ತಂಗಲು ವ್ಯವಸ್ಥೆ ಇರುವ 5 ಮೆಗಾ ವಸತಿ ನಿಲಯ ಸ್ಥಾಪನೆಗೆ ಚಾಲನೆ ನೀಡಿರುವ ಬಗ್ಗೆ ಮಾಹಿತಿ ನೀಡಲಾಗಿದೆ.
ಪೌರಕಾರ್ಮಿಕರ ಸೇವೆ ಕಾಯಂ ಬಗ್ಗೆ ತಿಳಿಸಲಾಗಿದೆ. ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ, ನೇರ ಪಾವತಿ ಪದ್ಧತಿಯಡಿ ವೇತನ ಪಡೆಯುತ್ತಿರುವ 11,133 ಪೌರಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಲು ಸಚಿವ ಸಂಪುಟದಲ್ಲಿ ಕೈಗೊಂಡಿರುವ ಮಹತ್ವದ ತೀರ್ಮಾನದ ಬಗ್ಗೆ ವಿವರವಾಗಿ ಹೇಳಲಾಗಿದೆ.
ರಾಜ್ಯದ ಇತಿಹಾಸದಲ್ಲೇ ಏಕಕಾಲಕ್ಕೆ ಅತಿಹೆಚ್ಚು ಶಾಲಾ ಕೊಠಡಿ ನಿರ್ಮಾಣ ಮಾಡಿದ ‘ವಿದ್ಯಾ ಕಲಾಣ್ಯ’ ಯೋಜನೆ, 2021-22ನೇ ಸಾಲಿನ ಪ್ರವಾಹದಿಂದ ಹಾನಿಗೊಳಗಾದ 53,636 ಮನೆಗಳಿಗೆ ಒಟ್ಟು 341.56 ಕೋಟಿ ರೂ. ಪರಿಹಾರ, ವಿವಿಧ ವಸತಿ ಯೋಜನೆಗಳ ಬಗ್ಗೆ ಮಾಹಿತಿ ಅನಾವರಣಗೊಂಡಿದೆ. ರಾಜ್ಯದ ವಿವಿಧ ಹೆದ್ದಾರಿ ಅಭಿವೃದ್ಧಿ, ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಕೈಗೊಂಡಿರುವ ವಿವಿಧ ಯೋಜನೆಗಳು, ಮಹಿಳಾ ಸಬಲೀಕರಣ, ಸಮಾಜ ಕಲ್ಯಾಣ ಇಲಾಖೆ, ಎಸ್‌ಸಿ/ಎಸ್‌ಟಿ ಸಮುದಾಯಗಳ ಕಲ್ಯಾಣ, ಆರೋಗ್ಯ ಸೇವೆ, ನೇಕಾರರ ಕಲ್ಯಾಣ, ಆಹಾರ ಭದ್ರತೆ, ನಗರಾಭಿವೃದ್ಧಿ, ನೀರಾವರಿ ಸಾಮರ್ಥ್ಯ ಹೆಚ್ಚಳ ಸಂಬಂಧ ಕೈಗೊಂಡ ಯೋಜನೆಗಳ ಬಗ್ಗೆ ತಿಳಿಸಲಾಗಿದೆ. ರೈತ ಕಲ್ಯಾಣ, ಕೃಷಿಗೆ ಉತ್ತೇಜನ, ಮುಖ್ಯಮಂತ್ರಿ ರೈತ ವಿದ್ಯಾನಿಧಿ, ಬೀದಿ ಬದಿ ವ್ಯಾಪಾರಿಗಳ ನೆರವು, ಗ್ರಾಮೀಣ ನೀರು ಸರಬರಾಜು, ಕಾರ್ಮಿಕ ಕಲ್ಯಾಣ ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಸಾಮಾಜಿಕ ಭದ್ರತೆ ಅಡಿ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಮೈತ್ರಿ, ಮನಸ್ವಿನಿ, ವಿಕಲಚೇತನರ ಮಾಸಾಶನ ಹಾಗೂ ಆಸಿಡ್ ದಾಳಿ ಸಂತ್ರಸ್ತರ ಯೋಜನೆಗಳ ಪಿಂಚಣಿ ಮೊತ್ತ ಹೆಚ್ಚಳ, ಕಾರ್ಮಿಕ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯ ಮೂಲಕ ಹೋಟೆಲ್ ಉದ್ಯಮದ ಬೆಂಬಲಕ್ಕೆ ಏಕಗವಾಕ್ಷಿ ವ್ಯವಸ್ಥೆ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ನೀಡಿರುವ ಭರವಸೆ ಬಗ್ಗೆ ಸಮಗ್ರ ವಿವರ ದೊರಕಲಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ನಿರ್ಮಿಸಿರುವ ಮಳಿಗೆಯಲ್ಲಿ ರಾಜ್ಯ ಸರ್ಕಾರದ ಎಲ್ಲ ಯೋಜನೆಗಳ ಮಾಹಿತಿ ನೀಡುವ ಕೆಲಸ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಒಂದು ವರ್ಷ ಅವಧಿಯಲ್ಲಿ ಘೋಷಿಸಿರುವ ಕಾರ್ಯಕ್ರಮ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಕೃಷಿ, ನೀರಾವರಿ, ಬಡ ವಿದ್ಯಾರ್ಥಿಗಳ ಹಾಗೂ ಗಾಮೀಣ ಜನತೆಯ ಬದುಕನ್ನು ಹಸನಾಗಿಸಲು ರೂಪಿಸಿರುವ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.ಟಿ.ಕೆ.ಹರೀಶ್ಸಹಾಯಕ ನಿರ್ದೇಶಕವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ